ಕಾಸರಗೋಡು: ಕೇರಳ ಮತ್ತು ಕರ್ನಾಟಕದಲ್ಲಿ ಮತಸೌಹಾರ್ದತೆಗೆ ಹೆಸರುಪಡೆದಿರುವ ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಎರಡು ವರ್ಷಗಳಿಗೆ ಒಂದು ಬಾರಿ ನಡೆಯುತ್ತಿರುವ ತಙಳ್ ಉಪ್ಪಾಪ ಉರುಸ್ ಸಮಾರಂಭ 2020 ಜನವರಿ 22ರಿಂದ ಫೆಬ್ರವರಿ 2ರ ವರೆಗೆ ಜರುಗಲಿರುವುದಾಗಿ ಉರುಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಶಾಸಕ ಎನ್.ಎ ನೆಲ್ಲಿಕುನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ನೆಲ್ಲಿಕುಂಜೆಯಲ್ಲಿ ತನ್ನ ಅಂತಿಮ ದಿನಗಳನ್ನು ಕಳೆದಿರುವ ತಙಳ್ ಉಪ್ಪಾಪ ಅವಿಭಜಿತ ದ. ಕ ಸಹಿತ ವಿವಿಧ ಜಿಲ್ಲೆಗಳಲ್ಲೂ ಸಂಚರಿಸಿ, ದೀನದಲಿತರಿಗೆ ಅಭಯ ನೀಡುವ ಮೂಲಕ ಎಲ್ಲ ಸಮುದಾಯದವರೊಂದಿಗೆ ಗುರುತಿಸಿಕೊಂಡು ಖ್ಯಾತಿಗೂ ಕಾರಣರಾಗಿದ್ದರು. ತಙಳ್ ಉಪ್ಪಾಪ ಅವರ ಸಂಸ್ಮರಣಾ ವಾರ್ಷಿಕವನ್ನು ಉರುಸ್ ಆಗಿ ಆಚರಿಸಲಾಗುತ್ತಿದ್ದು, ನಾನಾ ಭಾಗದಿಂದ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಜಾತಿ, ಮತ ಭೇದವಿಲ್ಲದೆ ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಪ್ರಾಂಗಣದಲ್ಲಿ ಜನತೆ ಒಟ್ಟು ಸೇರುತ್ತಿದ್ದಾರೆ.
ಜನವರಿ 22ರಿಂದ ಹನ್ನೊಂದು ದಿವಸಗಳ ಕಾಲ ಉರುಸ್ ಅಂಗವಾಗಿ ಪ್ರಮುಖ ಧಾರ್ಮಿಕ ಪಂಡಿತರನ್ನೊಳಗೊಂಡ ಧಾರ್ಮಿಕ ಪ್ರವಚನ ನಡೆಯಲಿರುವುದು. ಫೆ. 2ರಂದು ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಸಾಮೂಹಿಕ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಿ.ಎಂ ಕುಞËಮು ಹಾಜಿ, ಎನ್.ಕೆ ಅಬ್ದುಲ್ ರಹಮಾನ್ ಹಾಜಿ, ಕಟ್ಟಪ್ಪಣಿ ಕುಙËಮು ಹಾಜಿ, ಪಿ.ಎ ಮಹಮ್ಮದ್ ಹಾಜಿ, ಲತೀಫ್, ಕೆ.ಇ ನವಾಜ್, ಪ್ರಚಾರ ಸಮಿತಿ ಪದಾಧಿಕಾರಿಗಳಾದ ಶಾಫಿ ತೆರುವತ್, ಎನ್.ಎಂ ಜುಬೈರ್ ಉಪಸ್ಥಿತರಿದ್ದರು.

