ಬದಿಯಡ್ಕ: ಶರಣಮಂತ್ರ ಘೋಷಣೆಗಳೊಂದಿಗೆ ಬುಧವಾರ ಪೂರ್ವಾಹ್ನ ಧನುರ್ಲಗ್ನ ಶುಭಮುಹೂರ್ತದಲ್ಲಿ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ನೂತನ ರಜತ ಫಲಕ ಪ್ರತಿಷ್ಠೆ ಜರಗಿತು. ಕ್ಷೇತ್ರಾಚಾರ್ಯ ಕಿಳಿಂಗಾರು ವೇದಮೂರ್ತಿ ಶಿವರಾಮ ಭಟ್ಟರ ನೇತೃತ್ವದಲ್ಲಿ ಪ್ರತಿಷ್ಠಾ ವಿಧಿವಿಧಾನಗಳು ನಡೆದುವು. ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನೆಕ್ರಾಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಶ್ರೀಮಂದಿರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಸಿಂಗಾರಿಮೇಳದೊಂದಿಗೆ ಹೊರೆಕಾಣಿಕೆಯ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ಕ್ಷೇತ್ರಾಚಾರ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ನಡೆಯಿತು. ಬುಧವಾರ ಬೆಳಗ್ಗೆ ಅಷ್ಟದ್ರವ್ಯ ಗಣಪತಿ ಹೋಮ, ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದವರಿಂದ ಭಜನೆ ನಡೆಯಿತು.
ತತ್ವಮಸಿ ಸಿಂಗಾರಿ ಮೇಳದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಸಿಂಗಾರಿ ಮೇಳ ಪ್ರದರ್ಶನ ನಡೆಯಿತು. ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ತತ್ವಮಸಿ ಸಿಂಗಾರಿ ಮೇಳದ ಸೇವಾರೂಪದಲ್ಲಿ ಅನ್ನದಾನ. ಸಂಜೆ ನೆಕ್ರಾಜೆ ಶ್ರೀ ಗೋಪಾಲಕೃಷ್ಣ ಭಜನಾ ಸಂಘದ ಭಜನೆ, ರಾತ್ರಿ ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದವರಿಂದ ಭಜನೆ, ಸತ್ಯನಾರಾಯಣ ಪೂಜೆ ಜರಗಿತು. ರಾತ್ರಿ 2ನೇ ಮೈಲು ಯುವಕೇಸರಿ ಫ್ರೆಂಡ್ಸ್ ಕ್ಲಬ್ ಸೇವಾ ರೂಪದಲ್ಲಿ ಅನ್ನದಾನ, ಮಾವಿನಕಟ್ಟೆ ಶ್ರೀಕೃಷ್ಣಲೀಲಾ ಬಾಲಗೋಕುಲದ ವತಿಯಿಂದ ನೃತ್ಯ ವೈವಿಧ್ಯ, ಬೆಳ್ಳಿಗೆ ಡಿ.ಡಿ.ಆರ್.ಡ್ಯಾನ್ಸ್ ತಂಡದವರಿಂದ ನೃತ್ಯ ವೈಭವ ನಡೆಯಿತು.
ಇಂದಿನ(ನ.21) ಕಾರ್ಯಕ್ರಮಗಳು :
ಪ್ರಾತಃಕಾಲ ಮುದ್ರಾಧಾರಣೆ, 7ರಿಂದ ಭಜನೆ, 11ರಿಂದ ಧಾರ್ಮಿಕ ಸಭೆ. ಮಂದಿರದ ಸೇವಾಸಮಿತಿ ಅಧ್ಯಕ್ಷ ಕೆ.ದಿವಾಕರ ಮಾವಿನಕಟ್ಟೆ ಅಧ್ಯಕ್ಷತೆಯಲ್ಲಿ ಸಹಕಾರ ಭಾರತಿ ಅಖಿಲ ಭಾರತ ಕಾರ್ಯದರ್ಶಿ ನ್ಯಾಯವಾದಿ ಕೆ.ಕರುಣಾಕರನ್ ನಂಬ್ಯಾರ್ ಧಾರ್ಮಿಕ ಭಾಷಣ, ಗಣ್ಯರ ಉಪಸ್ಥಿತಿ, ಕೃತಜ್ಞತಾ ಸಮರ್ಪಣೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಅಪರಾಹ್ನ 2ರಿಂದ ಬದಿಯಡ್ಕ ದಾಸ ಸಂಕೀರ್ತನಾ ಬಳಗದಿಂದ ಭಜನೆ, ಸಾಯಂ 5ರಿಂದ ಮನುಪಣಿಕ್ಕರ್ ಮತ್ತು ಬಳಗ ಶ್ರೀಶೈಲಂ ನಾರಂಪಾಡಿ ಇವರಿಂದ ತಾಯಂಬಕ. 6.30ರಿಂದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಿಂದ ಹುಲ್ಪೆ ಮೆರವಣಿಗೆ, ಭಜನೆ, 10.30ರಿಂದ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾ ಸಂಘದ 33ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಮಹಿಷಮರ್ಧಿನಿ ಶಾಂಭವಿ ವಿಲಾಸ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.


