ಮುಳ್ಳೇರಿಯ: ಕನ್ನಡ ಭಾಷಾ ಮಾಧ್ಯಮದಲ್ಲಿ ಕನ್ನಡ ಅರಿತವರನ್ನೇ ನೇಮಕಾತಿಗೊಳಿಸಬೇಕು. ಮುಂದೆ ಗೊಂದಲಗಳಾಗದಂತೆ ಶಾಶ್ವತ ಪರಿಹಾರಗೊಳಿಸಬೇಕು. ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಯಶಸ್ವಿಯಾಗಿ ಮುಂದುವರಿಸಬೇಕು. ಕಲಾ ಆರೋಗ್ಯ ವೃತ್ತಿ ಪರಿಚಯ ಶಿಕ್ಷಣವನ್ನು ಅಧ್ಯಾಪಕ ತರಬೇತಿಯೊಂದಿಗೆ ಕಾರ್ಯಕ್ಷಮತೆಗೊಳಿಸಬೇಕು, ನೂತನ ಪಿಂಚಣಿ ವ್ಯವಸ್ಥೆ ಬದಲು ಹಿಂದಿನ ಪದ್ಧತಿ ಜಾರಿಗೆ ತರಬೇಕು. ಅನುದಾನಿತ ಶಾಲೆಗಳಲ್ಲಿ ನೇಮಕಗೊಂಡ ಅಧ್ಯಾಪಕರ ಹುದ್ದೆ ಮಂಜೂರುಗೊಳಿಸಬೇಕೆಂದು ಕುಂಬಳೆ ಉಪಜಿಲ್ಲಾ ಕೆ.ಎಸ್.ಟಿ.ಎ.ಸಮ್ಮೇಳನವು ಠರಾವು ಮಂಡಿಸಿ ಆಗ್ರಹಿಸಿದೆ.
ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಉಪಜಿಲ್ಲಾ ಸಮ್ಮೇಳನಕ್ಕೆ ಅಧ್ಯಕ್ಷ ನಿರ್ಮಲ ಕುಮಾರ್ ಧ್ವಜಾರೋಹಣ ನಡೆಸಿ ಚಾಲನೆಯಿತ್ತರು. ಕೆ.ಎಸ್.ಟಿ.ಎ. ರಾಜ್ಯ ಸಮಿತಿ ಸದಸ್ಯ ಹರಿದಾಸ್ ಕೆ. ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ. ಕಿರಿಯ ಪ್ರಾಥಮಿಕ ವಿಭಾಗವನ್ನೂ ಹೈಟೆಕ್ ಗೊಳಿಸಲಾಗಿದ್ದು ಸಾಕಷ್ಟು ಕಂಪ್ಯೂಟರ್ ವಿತರಿಸಲಾಗಿದೆ. ದಾಖಲೆ ಪ್ರಮಾಣದ ಅದ್ಯಾಪಕ ನೇಮಕಾತಿಯನ್ನು ಅಧ್ಯಯನ ವರ್ಷದ ಮೊದಲ ದಿನವೆ ನಡೆಸಲಾಗಿದೆ. ಅಧ್ಯಾಪಕರಿಗೆ ಸೇವಾಭದ್ರತೆ ಒದಗಿಸಲಾಗಿದೆ. ಸಾರ್ವಜನಿಕರನ್ನು ಸರಕಾರಿ, ಅನುದಾನಿತ ಶಾಲೆಗಳ ಕಡೆ ಆಕರ್ಷಿಸಿ ಐತಿಹಾಸಿಕ ಸಂಖ್ಯೆಯ ಮಕ್ಕಳ ದಾಖಲಾತಿ ನಡೆಸಿ ನೂತನ ಡಿವಿಷನ್ ಸೃಷ್ಟಿಸಲಾಗಿದೆ. ಶೈಕ್ಷಣಿಕ ಯೋಜನೆಗಳ ಮೂಲಕ ಉತ್ತಮ ಫಲಿತಾಂಶ ಪಡೆಯಲಾಗುತ್ತಿದೆ. ಪ್ರಸಕ್ತ ಸರಕಾರದ ಅವಧಿಯು ಶೈಕ್ಷಣಿಕ ಕ್ಷೇತ್ರದ ಸುವರ್ಣಯುಗ ಎಂದರು.
ಜಿಲ್ಲಾ ಸಹ ಕಾರ್ಯದರ್ಶಿ ಕೆ.ವಿ.ರಾಜೇಶ್ ಸಂಘಟನಾ ವರದಿ ಮಂಡಿಸಿದರು. ಕೇರಳದ ಅತೀ ದೊಡ್ಡ ಅಧ್ಯಾಪಕ ಸಂಘಟನೆಯ ಕಾರ್ಯವೈಖರಿಯನ್ನು ವಿವರಿಸಿದರು. ಉಪಜಿಲ್ಲಾ ಕಾರ್ಯದರ್ಶಿ ರಾಜೇಶ್ ಎಂ. ಗತವರ್ಷದ ಸಮಗ್ರ ಚಟುವಟಿಕೆಯನ್ನು ಮಂಡಿಸಿದರು. ಕೋಶಾಧಿಕಾರಿ ಪದ್ಮನಾಭನ್ ಆಯ ವ್ಯಯ ಲೆಕ್ಕಪತ್ರ ಮಂಡಿಸಿದರು. ಸಚಿತಾ ರೈ ಹುತಾತ್ಮ ಸ್ಮರಣೆ, ಅನೀಶ್ ರಾಜ್ ಸಂತಾಪ ಮಂಡಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಷ್ಣುಪಾಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಣ್ಣಿಕೃಷ್ಣನ್, ಕುಂಞÂಕೃಷ್ಣನ್, ಜಿಲ್ಲಾ ಸಮಿತಿ ಸದಸ್ಯರಾದ ಪ್ರಮೋದ ಕುಮಾರ್, ವಿಜಯ ಕುಮಾರ್, ಪ್ರಕಾಶ್ ಬಿ.ಎಂ. ಶುಭಾಶಂಶನೆಗೈದರು.
ಬಳಿಕ ಬದಿಯಡ್ಕ, ದೇಲಂಪಾಡಿ, ಪುತ್ತಿಗೆ, ನೀರ್ಚಾಲು, ಕುಂಬಳೆ, ಎಣ್ಮಕಜೆ, ಮುಳ್ಳೇರಿಯ ಮೊದಲಾದ ಶಾಖೆಗಳ ಗುಂಪು ಚರ್ಚೆನಡೆದು ಸಂಶಯಗಳನ್ನು ಮಂಡಿಸಿದರು. ರೋಹಿತ್, ಗಿರೀಶ, ಅನಿಲ್ ಕುಮಾರ್ ಮುಂತಾದವರು ಭಾಗವಹಿಸಿದರು. ಹರಿದಾಸ್ ಅವರು ಅಭಿಪ್ರಾಯಗಳನ್ನು ಕ್ರೋಢಿಕರಿಸಿದರು. ಸಂಘಟನಾ ವರದಿ, ಲೆಕ್ಕಪತ್ರ ಅಂಗೀಕರಿಸಲಾಯಿತು. ಮುಂದಿನ ವರ್ಷಕ್ಕೆ 45 ಜನರ ಕಾರ್ಯಕಾರಿ ಸಮಿತಿ ಆರಿಸಲಾಯಿತು. ನಿರ್ಮಲ್ ಕುಮಾರ್ ಅಧ್ಯಕ್ಷರಾಗಿಯೂ, ರಾಜೇಶ್ ಕಾರ್ಯದರ್ಶಿಯಾಗಿಯೂ ಪುನರಾಯ್ಕೆಯಾದರು. ಸಹ ಕಾರ್ಯದರ್ಶಿ ಸುಭಾಷ್ ವಂದಿಸಿದರು. ಸಾರ್ವಜನಿಕ ಸಮಾರಂಭದಲ್ಲಿ ಗೋವಿಂದ ಮಾಸ್ತರ್ ಪ್ರಧಾನ ಭಾಷಣ ಮಾಡಿದರು.

