ಕಾಸರಗೋಡು: ಬಹುಭಾಷೆ ಮತ್ತು ಸಾಂಸ್ಕೃತಿಯ ವೈವಿಧ್ಯದ ಹಿನ್ನೆಲೆಯಿರುವ ಕಾಸರಗೋಡು ಜಿಲ್ಲೆಯಲ್ಲಿ ಈ ಬಾರಿ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಎಲ್ಲ ಅಂಗಗಳೂ ವಿಶಿಷ್ಟ ವಾಗಿರಬೇಕು ಎಂದು ಸಂಘಟಕ ಸಮಿತಿ ಬಯಸಿದರೆ ಅದು ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಸ್ವಾಗತ ಗಾನ ಕೂಡ ವಿಶೇಷತೆಯಿಂದ ಕೂಡಿದೆ. ಮಲೆಯಾಳಂ ನ ಮಹಾಕವಿ ಕುಟ್ಟಮತ್ ಅವರ ಮೊಮ್ಮಗ ಕೆ.ವಿ.ಮಣಿಕಂಠನ್ ಅವರು ಈ ಹಾಡು ರಚಿಸಿದ್ದಾರೆ. ಇವರು ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ, ಭೌಗೋಳಿಕ, ಸಾಹಿತ್ಯಿಕ ಹಿನ್ನೆಲೆಗಳನ್ನು ಒಳಗೊಂಡು ಈ ಕವನ ರಚನೆಯಾಗಿದೆ. ಮಹಾಕವಿ ಕುಟ್ಟಮತ್ ಅವರೂ ಕಾವ್ಯ ಪ್ರಪಂಚದಲ್ಲಿ ಗುರುತಿಸಿಕೊಂಡದ್ದೂ ಇದೇ ಛಾಪಿನಿಂದ. ಜೊತೆಗೆ ಇದೇ ಕವಿಯ ಹುಟ್ಟೂರಲ್ಲಿ ಈ ಬಾರಿಯ ರಾಜ್ಯ ಮಟ್ಟದ ಕಲೋತ್ಸವವೂ ನಡೆಯುತ್ತಿದೆ ಎಂಬುದು ಗಮನಾರ್ಹ.
15 ನಿಮಿಷದ ಆಲಾಪನೆ ಹೊಂದಿರುವ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿವರು ಹಿರಿಯ ಸಂಗೀತಗಾರ ಕಾಞಂಗಾಡ್ ರಾಮಚಂದ್ರನ್ ಅವರು. 60 ಮಂದಿ ಶಿಕ್ಷಕರು ಈ ಹಾಡನ್ನು ಕಲೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಆಲಾಪಿಸಲಿದ್ದಾರೆ.


