ಬದಿಯಡ್ಕ: ತಾಯಿ ಮಕ್ಕಳಿಗೆ ಕಥೆ ಹೇಳಿ ಅವರನ್ನು ಬೆಳೆಸುತ್ತಾಳೆ. ಹೀಗಾಗಿ ಮನೆಯಂಗಳದಲ್ಲೇ ಸಾಹಿತ್ಯ ಹುಟ್ಟುತ್ತದೆ ಎಂದು ಕೇರಳ ರಾಜ್ಯ ಗ್ರಂಥಾಲಯ ಕೌನ್ಸಿಲ್ ನ ಸದಸ್ಯ ಇ.ಜನಾರ್ದನನ್ ಹೇಳಿದರು.
ಅವರು ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ನ 2019-20ನೆಯ ವರ್ಷದ ಯೋಜನೆಯ ಅಂಗವಾಗಿ ಕಾಸರಗೋಡು ತಾಲೂಕು ಗ್ರಂಥಾಲಯ ಕೌನ್ಸಿಲ್ ನ ಸಹಕಾರದೊಂದಿಗೆ ಏತಡ್ಕದ ವೈ.ಕೆ ಗಣಪತಿ ಭಟ್ ಅವರ ಮನೆ 'ಗಣಪತಿ ನಿಲಯ' ದಲ್ಲಿ ಭಾನುವಾರ ಜರಗಿದ ವಿನೂತನ ಕಾರ್ಯಕ್ರಮ 'ಮನೆಯಂಗಳದಲ್ಲಿ ಸಾಹಿತ್ಯೋತ್ಸವ' ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯೇ ಒಂದು ಪಾಠ ಶಾಲೆ. ಮನೆಯಂಗಳದಿಂದಲೇ ಸಾಹಿತ್ಯ ಸಂವಾದ ಪ್ರಾರಂಭವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಕರ್ಕಾಟಕ ಮಾಸದಲ್ಲಿ ಮನೆಮನೆಯಲ್ಲಿ ನಡೆಯುವ ರಾಮಾಯಣ ಪಾರಾಯಣವನ್ನು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ಸಂಘಟನೆಯ ಕುರಿತಾಗಿ ವಿವರಣೆ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವಿ.ಬಿ ಕುಳಮರ್ವ ಮತ್ತು ವಿಜಯಾ ಸುಬ್ರಹ್ಮಣ್ಯ ಅವರನ್ನು ಶಾಲು ಹೊದೆಸಿ,ಪುಸ್ತಕಗಳನ್ನು ನೀಡಿ ಉದ್ಘಾಟಕರು ಗೌರವಿಸಿದರು. ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಗಣರಾಜ ಕೆ ವಂದಿಸಿದರು.


