ಬದಿಯಡ್ಕ: ಮನುಷ್ಯನ ಅತಿ ದೊಡ್ಡ ಸಂಶೋಧನೆ ಭಾಷೆ. ಭಾಷೆಯಿಂದ ಸಾಹಿತ್ಯ, ಸಾಹಿತ್ಯದಿಂದ ಸಂಸ್ಕøತಿ ಬೆಳೆಯುತ್ತದೆ. ಅನುಭವ ಅನುಭಾವಗಳ ಸಮ್ಮಿಳಿತವೇ ಕಾವ್ಯ. ಕಾವ್ಯದಿಂದ ಜೀವನಾನುಭವ. ಜೀವನಾನುಭವದಿಂದ ಸಾಹಿತ್ಯ ರಚನೆಯಾಗುತ್ತದೆ ಎಂದು ಸಾಹಿತಿ,ಶಿಕ್ಷಣ ತಜ್ಞ, ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕದ ಅಧ್ಯಕ್ಷ ವಿ.ಬಿ ಕುಳಮರ್ವ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಗಣಪತಿ ನಿಲಯದಲ್ಲಿ ಜರಗಿದ ಮನೆಯಂಗಳದಲ್ಲಿ ಸಾಹಿತ್ಯೋತ್ಸವದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಕವಿಗಳು ವಾಚಿಸಿದ ಕವನಗಳನ್ನು ವಿಶ್ಲೇಷಿಸಿ ಅವರು ಮಾತನಾಡಿದರು. ಭಾಷೆಯನ್ನು ಸೂರ್ಯನಿಗೆ ಹೋಲಿಸಿದ್ದಾರೆ. ಭಾಷೆಯೆಂಬ
ಸೂರ್ಯ ನಮ್ಮ ಅಂತರಂಗಕ್ಕೆ ಬೆಳಕನ್ನು ಕೊಡುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು.
ಕವಿಗೋಷ್ಠಿಯಲ್ಲಿ ಸಾವಿತ್ರಿ ಕೆ ಭಟ್, ಶುಭ್ರ ಪುತ್ರಕಳ, ಗೀತಾ ಬಾಂಡಿಲಮೂಲೆ, ಹರ್ಷಿತಾ ಕಟ್ಟದಮೂಲೆ, ಹರ್ಷಿಣಿ ಗುಳಿಗಮೂಲೆ, ಪ್ಲವ್ಯ ವರು0ಬುಡಿ, ರೇಖಾ ಶ್ರೀನಿವಾಸ್ ಮುನಿಯೂರು,ರಾಜಾರಾಮ ಕೆ.ವಿ, ವಿಜಯಲಕ್ಷ್ಮಿ ಕಟ್ಟದಮೂಲೆ, ಎಂ.ಗೋಪಾಲಕೃಷ್ಣ ಭಟ್, ಚಂದ್ರಶೇಖರ ಏತಡ್ಕ, ಕೆ.ನರಸಿಂಹ ಭಟ್ ಕವನಗಳನ್ನು ವಾಚಿಸಿದರು. ನರಸಿಂಹ ಭಟ್ ನಿರ್ವಹಿಸಿದರು.
ಕಥಾ ಗೋಷ್ಠಿ:
ಹಿರಿಯ ಕಥೆಗಾರ್ತಿ ವಿಜಯಾ ಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಕಥಾ ಗೋಷ್ಠಿ ನಡೆಯಿತು. ಅನಿವಾರ್ಯ ಕಾರಣಗಳಿಂದಾಗಿ ಅನುಪಸ್ಥಿತರಿದ್ದ ಬಿ.ಎಸ್ ಯೇತಡ್ಕ ಅವರ ಕಥೆಯನ್ನು ಮಹೇಶ್ ಏತಡ್ಕ ವಾಚಿಸಿದರು. ಅಧ್ಯಕ್ಷರು ಆ ಕಥೆಯನ್ನು ವಿಶ್ಲೇಷಿಸಿ ಮಾತನಾಡಿದರು. ಸುಧೀರ್ ಕೃಷ್ಣ ಪಿ. ಎಲ್ ನಿರೂಪಿಸಿದರು. ಕೆ.ಸುಬ್ರಹ್ಮಣ್ಯ ಭಟ್ ವಂದಿಸಿದರು.


