ಉಪ್ಪಳ: ಉಪ್ಪಳ ನದಿಯ ಪುನಶ್ಚೇತನ ಸಂಬಂಧ ಅಧ್ಯಯನ ನಡೆಸಿ, ಆಸುಪಾಸಿನ ಪ್ರದೇಶಗಳ ಕುಡಿಯುವ ನೀರಿನ ಬರ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಆಡಳಿತಾನುತಿ ನೀಡಿದೆ.
3.5ಲಕ್ಷ ರೂ. ಈ ನಿಟ್ಟಿನಲ್ಲಿ ಮೀಸಲಿರಿಸಲಾಗಿದೆ. ಕರ್ನಾಟಕದ ವೀರಕಂಭ ಮಲೆಗಳಲ್ಲಿ ಹುಟ್ಟಿ ಮಂಜೇಶ್ವರ ತಾಲೂಕಿನಲ್ಲಿ ಹರಿಯುವ ಉಪ್ಪಳ ನದಿ ಈಗ ವಿನಾಶದ ಅಂಚಿನಲ್ಲಿರುವುದನ್ನು ಗಂಭೀರವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಈ ಬಗ್ಗೆ ಮುತುವರ್ಜಿ ವಹಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
ತಾಲೂಕು ವ್ಯಾಪ್ತಿಯ 9 ಗ್ರಾಮಗಳನ್ನು, 4 ಗ್ರಾಮಪಂಚಾಯತ್ ಗಳನ್ನೂ ಆವರಿಸಿಕೊಂಡು ಉಪ್ಪಳನದಿಯಿದೆ. 17 ಸಬ್ ವಾಟರ್ ಶೆಡ್ಗಳಲ್ಲಿ, 26 ಮೈಕ್ರೋ ಶೆಡ್ ಗಳ ಮೂಲಕ ಆಳವಾದ ಅಧ್ಯಯನ ನಡೆಸಲು ವಿಶೇಷ ಅನುಮತಿ ನೀಡಸಲಾಗಿದೆ. ಸಾರ್ವಜನಿಕ ಸಹಭಾಗಿತ್ವ ಖಚಿತಪಡಿಸಿ, ಸಮಗ್ರ ಮೂಲಭೂತ ಸಮೀಕ್ಷೆ ನಡೆಸಿ, ಪುನಶ್ಛೇತನನಡೆಸಲು ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.


