ಕಾಸರಗೋಡು: ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಆದೇಶವನ್ನು ಕಟ್ಟಡುನಿಟ್ಟಾಗಿ ಜಾರಿಗೊಳಿಸುವಂತೆ ಹೈಕೋರ್ಟು ಸರ್ಕಾರಕ್ಕೆ ಆದೇಶಿಸಿದೆ. ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟವರು ದ್ವಿಚಕ್ರವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿರಬೇಕು. ಕಾರು ಸಹಿತ ಚತುಷ್ಚಕ್ರ ವಾಹನಗಳಲ್ಲಿ ಸಂಚರಿಸುವ ಹಿಂಬದಿ ಪ್ರಯಾಣಿಕರು ಸೀಟ್ ಬೆಲ್ಟ್ ಕಡ್ಡಾಯವಗಿ ಅಳವಡಿಸುವಂತೆಯೂ ಸೂಚಿಸಲಾಗಿದೆ.
ಮೋಟಾರು ವಾಹನ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ಮೂಲಕ ತಂದಿರುವ ಮಸೂದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೇರಳ ಸರ್ಕಾರ ಮುಂದಾಗಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಈ ನಿರ್ದೇಶಗಳನ್ನು ಜಾರಿಗೊಳಿಸುವ ಮೊದಲು, ಜಾಹೀರಾತಿನ ಮೂಲಕ ಜನತೆಗೆ ಮನವರಿಕೆ ಮಾಡಬೇಕು. ಆಗಸ್ಟ್ 1ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೋಟಾರುವಾಹನ (ತಿದ್ದುಪಡಿ)ಕಾನೂನಿನಲ್ಲಿ ರಿಯಾಯಿತಿ ನೀಡುವುದಾಗಲಿ, ಆದೇಶ ಜಾರಿಗೆ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುವುದಾಗಲಿ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಎ.ಎಂ ಶಫೀಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

