ಕಾಸರಗೋಡು: 2014 ರ ಬಳಿಕ ಜಲ ಪ್ರಾಧಿಕಾರದ ನಳ್ಳಿ ನೀರಿನ ದರ ಮತ್ತೆ ಹೆಚ್ಚಿಸುವ ತೀರ್ಮಾನಕೈಗೊಂಡಿದೆ. ಇದೇ ಸಂದರ್ಭದಲ್ಲಿ ಬಿಪಿಎಲ್ ವಿಭಾಗದವರಿಗೆ 15000 ಲೀಟರ್ ಮತ್ತು ಇತರ ವಿಭಾಗದವರಿಗೆ 3000 ಲೀಟರ್ ನೀರು ಹಿಂದಿನಂತೆ ನೀಡಲಾಗುವುದು. ನಂತರ ಬಳಸುವ ನೀರಿನ ದರ ಹೆಚ್ಚಿಸಲಾಗುವುದೆಂದು ಜಲಪ್ರಾಧಿಕಾರ ತಿಳಿಸಿದೆ.
ಜಲಪ್ರಾಧಿಕಾರ ಈಗ 3000 ಕೋಟಿ ರೂ.ಗಳ ನಷ್ಟದಲ್ಲಿದೆ. ಒಂದು ಲೀಟರ್ ನೀರಿನಲ್ಲಿ ಪ್ರಾಧಿಕಾರ 0.4 ಪೈಸೆ ಮಾತ್ರವೇ ವಸೂಲಿ ಮಾಡುತ್ತಿದೆ. ಕುಡಿಯಲು, ಆಹಾರ ಮತ್ತಿತರ ಅಗತ್ಯಗಳಿಗೆ ಮಾತ್ರವೇ ಜಲಪ್ರಾಧಿಕಾರದ ನೀರು ಬಳಸಬೇಕೆಂದು ನಿಬಂಧನೆ ಇದ್ದರೂ, ಕೆಲವರು ತಮ್ಮ ವಾಹನಗಳನ್ನು ತೊಳೆಯಲು ಮತ್ತು ಹೂದೋಟಕ್ಕೂ ಜಲಪ್ರಾಧಿಕಾರದ ನೀರನ್ನು ಬಳಸುತ್ತಿರುವುದನ್ನು ಪತ್ತೆಹಚ್ಚಿದೆ. ಜಲಪ್ರಾಧಿಕಾರ ರಾಜ್ಯದಲ್ಲಿ ಒಟ್ಟು 25 ಲಕ್ಷ ನೀರಿನ ಸಂಪರ್ಕ ನೀಡಿದೆ. ಮುಂದಿನ ವರ್ಷ ಇನ್ನೂ 10 ಲಕ್ಷದಷ್ಟು ಹೆಚ್ಚು ಸಂಪರ್ಕ ಒದಗಿಸಲು ತೀರ್ಮಾನಿಸಿದೆ.
ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ನೀರು ಬಳಸುವವರಿಂದ ಹೆಚ್ಚು ದರ ವಸೂಲಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ವಿದ್ಯುತ್ ಬಳಕೆ ವತಿಯಿಂದ ಮಾತ್ರ ಪ್ರಾಧಿಕಾರ ಪ್ರತೀ ತಿಂಗಳು ತಲಾ 23 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಬೇಕಾಗಿ ಬರುತ್ತಿದೆ. ಇತ್ತೀಚೆಗೆ ವಿದ್ಯುತ್ ದರ ಪಾವತಿಸಬೇಕಾಗಿ ಬಂದಿದೆ. ಇದರಿಂದ ಮಾತ್ರವಾಗಿ ಪ್ರತಿ ವರ್ಷ 60 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಪ್ರಾಧಿಕಾರಕ್ಕೆ ಉಂಟಾಗಿದೆ. ಹೀಗೆ ಪ್ರಾಧಿಕಾರಕ್ಕೆ ವರ್ಷಕ್ಕೆ 3.25 ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ನಷ್ಟವನ್ನು ಸರಿದೂಗಿಸಲು ನೀರಿನ ದರ ಹೆಚ್ಚಿಸುವ ತೀರ್ಮಾನ ಪ್ರಾಧಿಕಾರ ಕೈಗೊಂಡಿದೆ.
ಇದರಂತೆ ಪ್ರತೀ ತಿಂಗಳ 15000 ಲೀಟರ್ ನೀರ್ ಉಪಯೋಗಿಸುವವರಿಂದ ಒಂದು ಲೀಟರ್ ನೀರಿನ ದರವನ್ನು 4 ರೂ.ನಿಂದ 6 ರೂ. ಗೇರಿಸಲು ಪ್ರಾ„ಕಾರ ತೀರ್ಮಾನಿಸಿದೆ. ಅದಕ್ಕಿಂತ ಕಡಿಮೆ ನೀರು ಉಪಯೋಗಿಸುವ ಬಿಪಿಎಲ್ ವಿಭಾಗದವರಿಗೆ ದರ ಹೆಚ್ಚಳಗೊಳಿಸದಿರುವ ತೀರ್ಮಾನವನ್ನೂ ಪ್ರಾಧಿಕಾರ ಕೈಗೊಂಡಿದೆ. ರಾಜ್ಯ ಸಚಿವ ಸಂಪುಟ ಚರ್ಚೆ ಬಳಿಕವಷ್ಟೇ ನೀರಿನ ದರ ಏರಿಸುವ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.


