ಬೆಂಗಳೂರು: ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು ಶುಕ್ರವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಪೆÇ್ರ. ಎಲ್. ಎಸ್. ಶೇಷಗಿರಿರಾವ್ ಅವರು ಫೆಬ್ರವರಿ 16, 1925ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಮೂಲತಃ ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದವರು. ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಎಲ್ ಎಸ್ ಎಸ್ ಎಂದೇ ಪ್ರಸಿದ್ಧರು. ಇಂಗ್ಲಿಷ್ ಅಧ್ಯಾಪಕರಾಗಿ ತಮ್ಮ ಪ್ರಿಯ ಶಿಷ್ಯವರ್ಗದವರಿಗೆ ಎಂದೆಂದೂ ಮೇಷ್ಟ್ರು ಎನಿಸಿರುವ ಎಲ್ ಎಸ್ ಎಸ್ ಕನ್ನಡದ ಸಾಕ್ಷೀಪ್ರಜ್ಞೆ ಯ ಪ್ರತೀಕವೆಂದು ಹೆಸರಾದವರು.
ಸುದೀರ್ಘಕಾಲದ ಅಧ್ಯಾಪನವೇ ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಆರ್. ಗುಂಡೂರಾಯರ ಪತ್ರಿಕಾ ಕಾಯ್ರ್ದರ್ಶಿಯಾಗಿ, ಪುಸ್ತಕ ಪ್ರಾಧಿಕಾರದ ಪ್ರಥಮಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯಾದರ್ಶಿಯಾಗಿಯೂ ಎಲ್ ಎಸ್ ಎಸ್ ದುಡಿದಿದ್ದಾರೆ.
ಕೃತಿಗಳು: ಇಂಗ್ಲಿಷ್ ಸಾಹಿತ್ಯದ ಮೇರು ಕೃತಿಗಳನ್ನು ತಿಳಿಕನ್ನಡಕ್ಕೆ ಅನುವಾದಿಸಿದ್ದು ಶೇಷಗಿರಿರಾವ್ ಅವರ ಹೆಗ್ಗಳಿಕೆ. ಆಲಿವರ್ ಗೋಲ್ಡ್‍ಸ್ಮಿತ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಾಹಿತ್ಯ ವಿಶ್ಲೇಷಣೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಇತ್ಯಾದಿ ಕೃತಿಗಳು ಅವರ ಹೆಸರನ್ನು ಸಾಹಿತ್ಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆಲೆಗೊಳಿಸಿದವು.ಸಾಮಾನ್ಯ ಮನುಷ್ಯ (ಕಾದಂಬರಿ), ಇದು ಜೀವನ, ಜಗದ ಜಾತ್ರೆಯಲ್ಲಿ, ಮುಟ್ಟಿದ ಗುರಿ ಮತ್ತು ಇತರ ಕಥೆಗಳು, ಮುಯ್ಯಿ ಎಂಬ ಕಥಾಸಂಕಲನಗಳನ್ನು ರಚಿಸಿದ್ದಾರೆ. ಹಂಪಿ ವಿಶ್ವವಿದ್ಯಾಲಯಕ್ಕೆ ಇಂಗ್ಲಿಷ್-ಕನ್ನಡ, ಕನ್ನಡ- ಕನ್ನಡ ನಿಘಂಟನ್ನು ರಚಿಸಿಕೊಟ್ಟಿದ್ದಾರೆ.
ಮೈಸೂರು ಸರ್ಕಾರದ ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ, ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಬಿ.ಎಂ.ಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು. 1991ರಲ್ಲಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ಸೌಜನ್ಯ.


