ಕೊಲ್ಲಂ: ಶಬರಿಮಲೆಯಲ್ಲಿ 41ದಿವಸಗಳ ವ್ರತನುಷ್ಠಾನಗಳ ನಂತರ ಡಿಸೆಂಬರ್ 27ರಂದು ಮಂಡಲಪೂಜಾ ಮಹೋತ್ಸವ ನಡೆಯಲಿದ್ದು, ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಸನ್ನಿದಾನ ತಲುಪುತ್ತಿದ್ದಾರೆ. ಮಂಡಲಪೂಜಾ ಮಹೋತ್ಸವ ಸಂದರ್ಭ ಶ್ರೀ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಲಿರುವ ಚಿನ್ನದ ಅಂಗಿಯ ಮೆರವಣಿಗೆ ಆರನ್ಮುಳ ಶ್ರೀ ಪಾರ್ಥಸಾರಥೀ ಕ್ಷೇತ್ರದಿಂದ ಡಿಸೆಂಬರ್ 23ಕ್ಕೆ ಆರಂಭಗೊಂಡಿದ್ದು, ಡಿ. 26ರಂದು ಸಾಯಂಕಾಲ ಸನ್ನಿದಾನ ತಲುಪಲಿದೆ. ಹದಿನೆಂಟುಮೆಟ್ಟಿಲ ಬಳಿಯಿಂದ ತಂತ್ರಿವರ್ಯರು ಹಾಗೂ ಮುಖ್ಯ ಅರ್ಚಕರು ಆಭರಣ ಪಡೆದು, ಗರ್ಭಗುಡಿಯೊಳಗೆ ಕೊಂಡೊಯ್ದು, ಶ್ರೀದೇವರಿಗೆ ತೊಡಿಸಿದ ನಂತರ ದೀಪಾರಾಧನೆ ನಡೆಯಲಿದೆ. ಡಿ. 27ರಂದು ಚಿನ್ನಾಭರಣ ತೊಡಿಸಿ, ಮಂಡಲಪೂಜೆ ನೆರವೇರಲಿದೆ. ಡಿ. 26ರಂದು ಸೂರ್ಯಗ್ರಹಣ ನಡೆಯಲಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿವಸಗಳಿಂದ ಸನ್ನಿದಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಸೇರುತ್ತಿದ್ದಾರೆ.
ವಾಹನಗಳಿಗೆ ತಡೆ:
ಸನ್ನಿದಾನದಲ್ಲಿ ಅಯ್ಯಪ್ಪ ಭಕ್ತಾದಿಗಳ ಭಾರಿ ದಟ್ಟಣೆ ನಿಯಂತ್ರಿಸಲು ಪೊಲೀಸರು ಭಕ್ತಾದಿಗಳು ಸಂಚರಿಸುವ ವಾಹನಗಳನ್ನು ಅಲ್ಲಲ್ಲಿ ತಡೆಹಿಡಿಯುತ್ತಿರುವುದು ಭಾರಿ ವಿರೋಧಕ್ಕೂ ಕಾರಣವಾಯಿತು. ಪೊಲೀಸರ ಕ್ರಮಕ್ಕೆ ಮುಜರಾಯಿ ಇಲಾಖೆಯೂ ತನ್ನ ಅಸಮಧಾನ ವ್ಯಕ್ತಪಡಿಸಿದೆ. ಎರುಮೇಲಿ, ಪ್ಲಾಪಳ್ಳಿ, ಪತ್ತನಂತಿಟ್ಟ, ಕೋನ್ನಿ, ಮುಂಡಕ್ಕಯ, ಕುಮಳಿ ಮುಂತಾದೆಡೆ ವಾಹನಗಳನ್ನು ತಡೆಹಿಡಿಯಲಾಗುತ್ತಿದೆ. ಸನ್ನಿದಾನದಲ್ಲಿ ಭಕ್ತಾದಿಗಳ ದಟ್ಟಣೆ ಕಡಿಮೆಮಾಡುವ ನಿಟ್ಟಿನಲ್ಲಿ ವಾಹನ ತಡೆಹಿಡಿಯಲಾಗುತ್ತಿದೆ ಎಂದು ಪೊಲೀಸರು ತಿಳಿಸುತ್ತಿದ್ದರೂ, ಸನ್ನಿದಾನದಲ್ಲಿ ನಿಯಂತ್ರಿಸಲಾಗದ ರೀತಿಯಲ್ಲಿ ಭಕ್ತಾದಿಗಳ ದಟ್ಟಣೆ ಕಂಡುಬಂದಿಲ್ಲ ಎಂದು ಇಲಾಖೆ ಸಿಬ್ಬಂದಿ ತಿಳಿಸುತ್ತಿದ್ದಾರೆ.
ಡಿಸೆಂಬರ್ 24ರ ಬೆಳಗ್ಗೆ 6ರಿಂದ ಬುಧವಾರ ಬೆಳಗ್ಗೆ 6ರ ಮಧ್ಯೆ 1.16ಲಕ್ಷ ಮಂದಿ ಭಕ್ತಾದಿಗಳು ಸನ್ನಿದಾನ ತಲುಪಿದ್ದರು. ಕಳೆದ ಮೂರು ದಿವಸಗಳಲ್ಲಿ ಸುಮಾರು 4ಲಕ್ಷ ಮಂದಿ ಭಕ್ತಾದಿಗಳು ಅಯ್ಯಪ್ಪ ದರ್ಶನ ಪಡೆದಿರುವುದಾಗಿ ಇಲಾಖೆ ತಿಳಿಸಿದೆ. ಭಕ್ತಾದಿಗಳ ದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಅಗತ್ಯ ತರಬೇತಿಯಿಲ್ಲದ ಪೊಲೀಸರನ್ನು ಸನ್ನಿದಾನದಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಭಕ್ತಾದಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ ಅಲ್ಲದೆ, ದಟ್ಟಣೆ ನಿಯಂತ್ರಣಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಇಂದು ನಿಯಂತ್ರಣ:
ಸೂರ್ಯಗ್ರಹಣ ಹಾಗೂ ದೇವಾಲಯಕ್ಕೆ ಚಿನ್ನದ ಅಂಗಿ(ತಿರುವಾಭರಣ)ಮೆರವಣಿಗೆ ಆಗಮಿಸುವ ಹಿನ್ನೆಲೆಯಲ್ಲಿ ಡಿ.26ರಂದು ಸಂಜೆ ವರೆಗೆ ಭಕ್ತಾದಿಗಳಿಗೆ ಸನ್ನಿದಾನ ಪ್ರವೇಶ ತಡೆಹಿಡಿಯಲಾಗುವುದು. ಬುಧವಾರ ರಾತ್ರಿಯಿಂದ ಪಂಪೆಯಲ್ಲಿ ಭಕ್ತಾದಿಗಳನ್ನು ತಡೆಹಿಡಿದು, ಸಾಯಂಕಾಲ ನಂತರ ಸನ್ನಿದಾನಕ್ಕೆ ಬಿಡಲಾಗುವುದು. ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಡಿ.26ರಂದು ಬೆಳಗ್ಗೆ 7.30ರಿಂದ 11.30ರ ವರೆಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


