ಬದಿಯಡ್ಕ: ಬದಿಯಡ್ಕ ಚಿನ್ಮಯ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟಕ್ಕೆ ಧ್ವಜಾರೋಹಣಗೈದು ಪ್ರಸಿದ್ಧ ಕಬಡ್ಡಿ ಪಟು ಜಗದೀಶ್ ಕುಂಬಳೆ ಶಾಲಾ ಕ್ರೀಡಾ ನಾಯಕ ನಕುಲ್ ಪೈ ಅವರಿಗೆ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿ ಚಾಲನೆಯನ್ನು ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಎಷ್ಟೋ ಮಂದಿ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹೊರತರುವಲ್ಲಿ ಇಂತಹ ಕ್ರೀಡಾಕೂಟಗಳು ಪ್ರಧಾನ ಪಾತ್ರವಹಿಸುತ್ತವೆ. ಇಂತಹ ಶಾಲೆಗಳ ಮೈದಾನದಲ್ಲಿ ಪಳಗಿದ ಮಕ್ಕಳು ಮುಂದೇ ದೇಶಕ್ಕೇ ಕೀರ್ತಿಯನ್ನು ತರುತ್ತಾರೆ ಎಂದು ಶಾಲೆಯ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.
ಪಿಲಿಂಗಲ್ಲು ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜ್ಞಾನದೇವ ಶೆಣೈ, ಪ್ರಾಂಶುಪಾಲ ಪ್ರಶಾಂತ್ ಬೆಳಿಂಜ, ಕ್ರೀಡಾ ಅಧ್ಯಾಪಕಿ ಪುಷ್ಪಾ ಎಂ. ಮಾತನಾಡಿದರು. ಅಧ್ಯಾಪಕ ಸೆಬಿನ್ ವರ್ಗೀಸ್ ನಿರೂಪಿಸಿದರು. ಅಧ್ಯಾಪಿಕೆ ಮಾನಸ ಕೆ. ಅತಿಥಿಗಳನ್ನು ಪರಿಚಯಿಸುತ್ತಾ ಕ್ರೀಡಾ ವಿಭಾಗದಲ್ಲಿ ರಾಷ್ಟ್ರಕ್ಕೆ ಕೊಡುಗೆಯನ್ನು ನೀಡಿದ ಕಾಸರಗೋಡಿನ ಅನಿಲ್ ಕುಂಬ್ಳೆ ಕ್ರಿಕೆಟ್ ಪಂದ್ಯಾಟದಲ್ಲಾದರೆ ಜಗದೀಶ್ ಕುಂಬಳೆ ಅವರು ನಮ್ಮ ದೇಶೀಯ ಕ್ರೀಡೆಯಾದ ಕಬಡ್ಡಿಯಲ್ಲಿ ಏಶ್ಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕವನ್ನು ಪಡೆದವರಾಗಿದ್ದಾರೆ. ಭಾರತೀಯ ಸೇನೆಯಲ್ಲಿಯೂ ಸೇವೆಗೈದ ಇವರು ನಮ್ಮ ಜಿಲ್ಲೆಯವರೆಂಬುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಸವಿವರವಾಗಿ ಪರಿಚಯಿಸಿದರು. ವಿದ್ಯಾರ್ಥಿ ಮನೀಶ ಸ್ವಾಗತಿಸಿದರು. ಶುಕ್ರವಾರ ಮತ್ತು ಶನಿವಾರಗಳಂದು ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಿತು.
ಚಿತ್ರ ಮಾಹಿತಿ: (1))ಅಂತಾರಾಷ್ಟ್ರೀಯ ಕಬಡ್ಡಿ ಪಟು ಜಗದೀಶ್ ಕುಂಬಳೆ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸುತ್ತಿರುವುದು.
2)ಅಂತಾರಾಷ್ಟ್ರೀಯ ಕಬಡ್ಡಿ ಪಟು ಜಗದೀಶ್ ಕುಂಬಳೆ ಅವರನ್ನು ಸನ್ಮಾನಿಸಲಾಯಿತು,
3)ಅಂತಾರಾಷ್ಟ್ರೀಯ ಕಬಡ್ಡಿ ಪಟು ಜಗದೀಶ್ ಕುಂಬಳೆ ಮಾತನಾಡುತ್ತಿರುವುದು,



