ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಸಂವಾಹಕ ಸಮೂಹದ ತೃತೀಯ ವರ್ಷದ ಸದಸ್ಯ ಸಂಗಮ ಹಾಗೂ ಸಮಾಜ ದರ್ಶನ ಯೋಜನೆಯ ಸಹಾಯಧನ ವಿತರಣಾ ಕಾರ್ಯಕ್ರಮ ಹೊಸಂಗಡಿಯ ಶ್ರೀ ಅಯ್ಯಪ್ಪ ಕ್ಷೇತ್ರ ಸಮೀಪದ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಜರಗಿತು.
ಪುರೋಹಿತ್ ನಿರಂಜನ ಆಚಾರ್ಯ ನೀರ್ಚಾಲು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸದಸ್ಯ ಸಂಗಮದಲ್ಲಿ ಸಾಹಿತ್ಯ ದರ್ಶನ ಸಮಿತಿಯ ಚುಟುಕು ಕವಿ ಮೌನೇಶ್ ಆಚಾರ್ಯ ಕಡಂಬಾರು, ಮೌನೇಶ್ ಪುರೋಹಿತ್ ಪುತ್ತಿಗೆ, ಮಹಿಳಾ ಸಮಿತಿಯ ಅಧ್ಯಕ್ಷೆ ಶೋಭ ಆಚಾರ್ಯ ಬಂದ್ಯೋಡು, ವಿಶ್ವಗಾನ ಮಂಜರಿ ಸಮಿತಿ ಸದಸ್ಯ ಮನೋಜ್ ಆಚಾರ್ಯ ಅಟ್ಟೆಗೋಳಿ, ಶಿಕ್ಷಣ ದರ್ಶನ ಸಮಿತಿಯ ಸಂಚಾಲಕಿ ಶಿಕ್ಷಕಿ ಅಕ್ಷಿತಾ ಎಂ.ಮಾಯಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗದ ಸ್ಥಾಪಕರಾದ ಜಯ ಮಣಿಯಂಪಾರೆ 2020ನೇ ಫೆಬ್ರವರಿ ತಿಂಗಳಲ್ಲಿ ನಡೆಸಲಿರುವ ತೃತೀಯ ವಿಶ್ವದರ್ಶನ ಸಮ್ಮೇಳನದ ರೂಪುರೇಷೆಯನ್ನು ಮಂಡಿಸಿದರು. ನಾವು ನಮ್ಮ ಕುಟುಂಬ ಎಂಬ ಆಶಯದಂತೆ `ವಸುದೈವ ಕುಟುಂಬಕಮ್' ಪರಿಕಲ್ಪನೆಯಲ್ಲಿ ಈ ಬಾರಿಯ ವಿಶ್ವದರ್ಶನ ಸಮ್ಮೇಳನ ಸಾಹಿತ್ಯ, ಸಾಂಸ್ಕøತಿಕ, ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರಂತೆ ವಿಶ್ವ ಪ್ರಭಾ ಎಂಬ ಸಾಹಿತ್ಯ ಕೃತಿ ಬಿಡುಗಡೆ, ಮಕ್ಕಳಿಗೆ ಜ್ಞಾನರತ್ನ ಪುರಸ್ಕಾರ, ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ವಿಶ್ವದರ್ಶನ ಸಮಾಜರತ್ನ ಪುರಸ್ಕಾರ, ಕವಿಗೋಷ್ಠಿ ಹಾಗೂ ಸದಸ್ಯರ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮ ಆಯೋಜಿಸಲು ಸಭೆ ತೀರ್ಮಾನಿಸಿತು.
ಸಮಾಜ ದರ್ಶನ ಯೋಜನೆಯ ಸಹಾಯ ಹಸ್ತ ವಿತರಣೆ: ಸದಸ್ಯ ಸಂಗಮದ ಸಭೆಯಲ್ಲಿ ಸಮಾಜ ಸೇವಕರಾದ ಶೋಭ ವಿಶ್ವನಾಥ ಆಚಾರ್ಯ ಬಂದ್ಯೋಡು ಅವರು ತಮ್ಮ ವತಿಯಿಂದ ವಿಶ್ವಕರ್ಮ ಸಮಾಜ ದರ್ಶನ ಯೋಜನೆಗೆ ನೀಡಿದ ಧನ ಸಹಾಯವನ್ನು ನಿರ್ಗತಿಕ ಬಡ ಕುಟುಂಬದ ಬಾಲಕನೋರ್ವನಿಗೆ ಶೈಕ್ಷಣಿಕವಾಗಿ ಸಹಾಯವಾಗುವ ನಿಟ್ಟಿನಲ್ಲಿ ವಿತರಿಸಲಾಯಿತು. ಕಳೆದ ತಿಂಗಳಲ್ಲಿ ಅಸೌಖ್ಯಕ್ಕೀಡಾಗಿ ನಿಧನರಾದ ಅಂಗಡಿಪದವು ನಿವಾಸಿ ಶೇಷಗಿರಿ ಆಚಾರ್ಯ ಅವರ ಪುತ್ರ ಧನುಷ್ ಆಚಾರ್ಯ ಮತ್ತು ತಾಯಿ ಬಬಿತಾ ಆಚಾರ್ಯ ಅವರಿಗೆ ಯೋಜನೆಯ ಸಹಾಯ ಧನವನ್ನು ವಿಶ್ವನಾಥ-ಶೋಭ ಆಚಾರ್ಯ ದಂಪತಿಗಳು ಹಸ್ತಾಂತರಿಸಿದರು. ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗದ ಸಂಚಾಲಕ ಕಿರಣ್ ಶರ್ಮ ಮಧೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


