ಮುಳ್ಳೇರಿಯ: ಕಾಸರಗೋಡು-ಸುಳ್ಯ ರಸ್ತೆಯಲ್ಲಿ ಕಾರಡ್ಕ ಸಮೀಪದ ವಣ್ಣಾಂಚಡವಿನಲ್ಲಿ ಶನಿವಾರ ಮಧ್ಯಾಹ್ನ ವರದಿಗಾರಿಕೆಗೆ ತೆರಳಿದ್ದ ಮಾಧ್ಯಮ ವರದಿಗಾರರು ಸಂಚರಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಗಾಯಗೊಂಡಿದ್ದಾರೆ.
ಸಮರಸ ಸುದ್ದಿಯ ಪುಟ ವಿನ್ಯಾಸಗಾರ, ಜನಂ ಟಿವಿ ಕ್ಯಾಮರಾಮೆನ್ ಉಪ್ಪಳ ಐಲದ ಧನರಾಜ್, ಮೀಡಿಯಾ ವನ್ ವರದಿಗಾರ ಷಬೀರ್(28), ಚಾಲಕ ಸಾಲಿಕ್(38) ಗಾಯಗೊಂಡಿದ್ದು ಕೂಡಲೇ ಇವರನ್ನು ಚೆಂಗಳದ ಆಸ್ಪತ್ರೆಗೆ ದಾಖಲಿಸಲಾಯಿತು. ಅನಂತರ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಧನರಾಜ್ ಐಲ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇರಿಯಣ್ಣಿಯಲ್ಲಿ ಒಂದು ವರದಿಯನ್ನು ಸಂಗ್ರಹಿಸಿ ಮರಳುತ್ತಿದ್ದಾಗ ಈ ಅಪಘಾತ ಉಂಟಾಗಿದೆ. ಆದೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು.
ವಣ್ಣಾಂಚಡವು ಪ್ರದೇಶದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದ್ದು ಅಮಿತ ವೇಗವೇ ಅಪಘಾತಗಳಿಗೆ ಕಾರಣವಾಗುತ್ತಿರುವುದಾಗಿ ಸ್ಥಳೀಯರು ಹೇಳುತ್ತಾರೆ.


