ಪೆರ್ಲ: ನಾದ ಸರಸ್ವತಿ ಸಂಗೀತ ಕಲಾಕೇಂದ್ರ ಇದರ 4ನೇ ವಾರ್ಷಿಕೋತ್ಸವ ಇತ್ತೀಚೆಗೆ ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಕಲಾ ನಿಲಯದಲ್ಲಿ ನಡೆಯಿತು.
ಬೆಳಗ್ಗೆ 10ಕ್ಕೆ ಸಂಗೀತ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ಹಾಗೂ ತಬ್ಲಾ ವಾದನ ಪ್ರದರ್ಶನಗೊಂಡಿತು.ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ವಿದ್ವಾನ್ ಶ್ರೀಯೋಗಿಶ್ ಶರ್ಮ ಬಳ್ಳಪದವು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಂಗೀತದಂತಹ ಕಲೆಗಳು ನಿರಂತರ ಕಲಿಕೆಯೊಂದರಿಂದಲೇ ಸಿದ್ದಿಸದು. ಅದು ಸಾಧನೆಯ ಮೇರು ಶಿಖರವಾಗಿದ್ದು, ಸಮರ್ಪಣೆ, ಗುರಿಯೆಡೆಗೆ ಸಾಗುವ ನಿಖರತೆ ಸಾಧನಾ ಶಿಖರತೆಗೊಯ್ಯುತ್ತದೆ. ಯಾವುದೇ ಕ್ಷೇತ್ರದ ವಿದ್ವಾಂಸ, ಕಲಾವಿದರನ್ನು ಪ್ರೋತ್ಸಾಹಿಸುವ ಜವಾಬ್ಧಾರಿ ಎಲ್ಲ ಸಜ್ಜನರ ಕೈಯಲ್ಲಿದೆ. ಪ್ರತಿಭೆಗಳನ್ನು, ಕಲಾ ಗುರುಗಳನ್ನು ಪರಸ್ಪರ ದೂಶಿಸದೆ ನಿಸ್ವಾರ್ಥತೆಯಲ್ಲಿ ಕಲಾಮಾತೆಯ ಸೇವೆಯನ್ನು ಮಾಡುವ ಮನೋಭಾವ ಬೆಳೆಸಿಕೊಂಡಲ್ಲಿ ಉನ್ನತಿ ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪೆರ್ಲ ಸತ್ಯನಾರಾಯಣ ಪ್ರೌಢಯ ಮುಖೋಪಾಧ್ಯಾಯ ರಾಜೇಂದ್ರ. ಬಿ ಮಾತನಾಡಿ ಒತ್ತಡಗಳ ಜೀವನದಲ್ಲಿ ಮಾನಸಿಕವಾಗಿ ನೆಮ್ಮದಿ ನೀಡುವಂತಹದ್ದು ಕಲೆಗಳು ಮಾತ್ರ. ಯಾವುದೇ ಕಲೆಗಳಿರಲಿ ಯಕ್ಷಗಾನ ಸಂಗೀತ ಅಥವಾ ಚಿತ್ರ ಕಲೆಗಳಾದರೂ ಮನಸ್ಸಿನ ನೋವುಗಳನ್ನು ಮರೆಮಾಚಿ ಶಾಂತಿಯನ್ನು ಕಂಡುಕೊಳ್ಳುವಲ್ಲಿ ಮಹತ್ತರ ಶಕ್ತಿಚೈತನ್ಯವೊದಗಿಸುತ್ತದೆ. ಆತ್ಮೋನ್ನತಿಗಾಗಿ ಕಲೆಯನ್ನು ವಿನಿಯೋಗಿಸಿಕೊಂಡಾಗ ಕೀರ್ತಿ ಒದಗಿಬರುತ್ತದೆ. ಹೆಸರಿನ ಹಿಂದೆ ಕೀರ್ತಿಯ ಹಿಂದೆ ಹೋಗದೆ ನ್ಯಾಯಯುತವಾದ ಪ್ರತಿಭೆಯನ್ನು ಉಳಿಸಿ ಬೆಳಿಸಿಕೊಂಡಾಗ ಕಲೆಯ ಜೊತೆ ನಾವು ಕೂಡಾ ಬೆಳೆಯಲು ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ನಾದ ಸರಸ್ವತಿ ಸಂಗೀತ ಕಲಾ ಕೇಂದ್ರದ ಪ್ರಾಧ್ಯಾಪಕ ಶಿವಾನಂದ ಉಪ್ಪಳ ಅವರನ್ನು ಸನ್ಮಾನಿಸಲಾಯಿತು. ಪ್ರಸಾದ್ ಸರವು ಸ್ವಾಗತಿಸಿ, ವಾಸುದೇವ ಕಾಮತ್ ವಂದಿಸಿದರು. ಶ್ರೀಧರ್ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೇಂದ್ರದ ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸುಗಮಸಂಗೀತ ಕಾರ್ಯಕ್ರಮ ನಡೆಯಿತು.



