ತಿರುವನಂತಪುರ: ಶಬರಿಮಲೆಯ ಭದ್ರತೆಗೆ ಸರ್ಕಾರ ಮತ್ತಷ್ಟು ಖರ್ಚುಮಾಡಲು ತೀರ್ಮಾನಿಸಿದ್ದು, ಈ ಬಾರಿ ಅಮೆರಿಕ ನಿರ್ಮಿತ ಅತ್ಯಾಧುನಿಕ ಸಲಕರಣೆಗಳನ್ನು ತರಿಸಿಕೊಳ್ಳಲಿದೆ. ಇದು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲಿರುವ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ಉಪಕರಣವಾಗಿರಲಿದೆ. ಸುಮಾರು ಮೂರುವರೆ ಕೋಟಿ ರೂ. ವೆಚ್ಚದ ಈ ಸಲಕರಣೆ ಶೀಘ್ರ ಶಬರಿಮಲೆ ತಲುಪಲಿರುವುದಾಗಿ ಸರ್ಕಾರ ತಿಳಿಸಿದೆ.
ಸನ್ನಿದಾನ, ಪಂಪೆ, ನೀಲಕ್ಕಲ್ ಸಹಿತ ಸೂಕ್ಷ್ಮ ಪ್ರದೇಶದಲ್ಲಿ ಇವುಗಳನ್ನು ಅಳವಡಿಸಲಾಗುವುದು. ಈಗಾಗಲೇ ಪಂಪಾ ಗಣಪತಿ ಕ್ಷೇತ್ರ ಆಸುಪಾಸು ಭಕ್ತಾದಿಗಳನ್ನು ಬಿಗಿ ತಪಾಸಣೆಗೊಳಪಡಿಸಿದ ನಂತರ ನೀಲಿಮಲೆ ಹತ್ತಲು ಅನುಮತಿ ನೀಡಲಾಗುತ್ತಿದೆ. ಭದ್ರತೆಗಾಗಿ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್, ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್, ಮೈನ್ ಸ್ವೀಪರ್, ಎಕ್ಸ್‍ಪ್ಲೋಸಿವ್ ಡಿಟೆಕ್ಟರ್, ಪೋರ್ಟೆಬಲ್ ಎಕ್ಸ್‍ರೇ ಮೆಶಿನ್, ಥರ್ಮಲ್ ಇಮೇಜಿನ್ ಕ್ಯಾಮರಾ, ಎಕ್ಸ್‍ರೇ ಬ್ಯಾಗೇಜ್ ಕ್ಯಾಮರಾ, ನೋನ್ ಲೀನಿಯರ್ ಜಂಕ್ಷನ್ ಡಿಟೆಕ್ಟರ್, ಬಾಂಬ್ ಸ್ಯೂಟ್, ಎಕ್ಸಾಮಿನೇಶನ್ ಮಿರರ್, ರಿಯಲ್ ಟೈಮ್ ವ್ಯೂವಿಂಗ್ ಸಿಸ್ಟಮ್, ಒಂದು ಕಿ.ಮೀ ವರೆಗೂ ಬೆಳಕು ಹಾಯಬಲ್ಲ ಕಮಾಂಡೋ ಟಾರ್ಚ್ ವ್ಯವಸ್ಥೆಯನ್ನು ಶಬರಿಮಲೆಯಲ್ಲಿ ಬಳಸಲಾಗುತ್ತಿದೆ. ಇದರ ಹೊರತಾಗಿ ಅಮೆರಿಕದಿಂದ ತರಿಸಿಕೊಳ್ಳಲಾಗುವ ಅತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದೆ.


