ಕಾಸರಗೋಡು: ಕಾಸರಗೋಡು ಜಿಲ್ಲೆಯ ಐತಿಹಾಸಿಕ ಸಂಕೇತ ಬೇಕಲಕೋಟೆಯಲ್ಲಿ ನಡೆಯುತ್ತಿರುವ ಪುಷ್ಪ-ಫಲ ಮೇಳಕ್ಕೆ ಭಾರೀ ಪ್ರಮಾಣದ ಜನಪ್ರವಾಹ ಹರಿದುಬರುತ್ತಿದೆ. ಕೃಷಿ ಇಲಾಖೆಯ ವಿವಿಧ ಸ್ಟಾಲ್ ಗಳು, ವಿವಿಧ ನರ್ಸರಿಗಳ ಸಹಿತ ಸಮೃದ್ಧವಾಗಿರುವ ಮೇಳ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ಕುಟುಂಬ ಸಮೇತರಾಗಿ ಬರುವ ಜಿಲ್ಲೆಯ ಮತ್ತು ವಿವಿಧೆಡೆಗಳ ಮಂದಿ ಕೈತುಂಬ ಹೂ ಸಸಿಗಳನ್ನು, ಫಲ ಬಿಡುವ ಸಸಿಗಳನ್ನು, ಬೀಜಗಳನ್ನು, ಗೊಬ್ಬರ ಇತ್ಯಾದಿಗಳನ್ನು ಖರೀದಿಸಿ ಮರಳುವ ದೃಸ್ಯ ಸಾಮನ್ಯವಾಗಿ ಕಂಡುಬರುತ್ತಿದೆ. ತಮ್ಮ ಕೃಷಿಜಾಗಗಳ ಮಣ್ಣಿ ಸ್ಯಾಂಪಲ್ ತರುವ ಮಂದಿ ಇಲ್ಲಿನ ಮೊಬೈಲ್ ಮಣ್ಣು ತಪಾಸಣೆ ಪ್ರಯೋಗಾಲಯದ ಪ್ರಯೋಜನ ಪಡೆಯುತ್ತಿದ್ದಾರೆ. ಕುಟುಂಬಶ್ರೀ ಘಟಕಗಳ ಆಹಾರಾಲಯಗಳೂ ಜನಪ್ರೀತಿ ಪಡೆಯುತ್ತಿವೆ. ದಾಸವಾಳ ಹೂವಿನ ಜ್ಯೂಸ್ ಸಹಿತ ಅನೇಕ ಅಪರೂಪದ ಆಕರ್ಷಣೆಗಳೂ ಇಲ್ಲಿವೆ. ಮಕ್ಕಳಿಗೆ ಆಟವಾಡುವ ವಿಭಾಗವೂ ಇದೆ.
ಎಲ್ಲ ವನ್ನೂ ಮೀರಿ ಅತ್ಯಾಕರ್ಷಕ ಬಣ್ಣ, ಗಾತ್ರಗಳಿಂದ ನಳನಳಿಸುವ ಹೂವಿನ, ಹಣ್ಣುಗಳ ಸಸಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಗುಲಾಬಿ, ಜೀನಿಯಾ, ಕಟಾಜಿಯಾ, ಜರೇನಿಯಂ, ಕೋನಿಯನ್ ಸಿಟ್ಟಿಯ, , ಡಾಲಿಯಾ, ಚೆಟ್ಟಿ, ದಾಸವಳ, ಆರ್ಕಿಡ್ ಸಹಿತ ಹೂವಿನ ಸಸ್ಯಗಳೂ, ಮಾವು, ಹಲಸು,ಮರದ್ರಾಕ್ಷಿ, ಸಾಂತೋಲ್ ಫ್ರುಟ್, ರುದ್ರಾಕ್ಷಿ, ಸ್ಟ್ರಾಬೆರಿ, ರಂಬೂಟಾನ್, ಸಹಿತ ಫಲ ಬಿಡುವ ಸಸಿಗಳು ಸೆಳೆಯುತ್ತಿವೆ.
ಪ್ರಕೃತಿಗೆ ಹಾನಿಮಾಡದ ಜೈವಿಕ ರೀತಿಯ ಕೀಟನಾಶಕಗಳು, ಗೊಬ್ಬರಗಳು ಇಲ್ಲಿ ಲಭಿಸುತ್ತಿವೆ. ಜೊತೆಗೆ ಇವುಗಳನು ಬಳಸುವ ರೀತಿ, ಅಗತ್ಯದ ಉಪಕರಣಗಳೂ ಇಲ್ಲಿ ನೀಡಲಾಗುತ್ತವೆ. ಗೋಮೂತ್ರ, ಸೆಗಣಿ, ಬೇವಿನಸೊಪ್ಪು ಇತ್ಯಾದಿ ಬಳಸಿದ ಶುದ್ಧ ಆಯುರ್ವೇದ ಔಷಧಗಳು ಲಭ್ಯವಿವೆ. ಗ್ರೋಬ್ಯಾಗ್, ತೆಂಗಿನನಾರಿನ ಮಣ್ಣು ಇತ್ಯಾದಿಗಳೂ ಇವೆ. ಮನೆ ಚಿಕ್ಕದಾಗಿದ್ದರೆ ಪೂರಕವಾದ ಅಡುಗೆಮನೆ ಸಸಿಗಳ ಕಿಟ್ ಕೂಡ ಇಲ್ಲಿದೆ.
ಹಾರ್ಟಿ ಕಲ್ಚರ್ ಮಿಷನ್ ನೇತೃತ್ವದ ಪರಂಪರಾಗತ ಬೀಜಗಳ ಉತ್ಪನ್ನಗಳು, ಈ ಬಗ್ಗೆ ಜಾಗೃತಿಮೂಡಿಸುವ ಕೇಂದ್ರ ಇಲ್ಲಿ ಗಮನಸೆಳೆಯುತ್ತದೆ. 67 ವಿಧದ ಭತ್ತದ ಬೀಜಗಳು, 80 ವಿಧದ ಅಲಸಂಡೆ ಬೀಜಗಳು, ಒಂದು ಎಕ್ರೆ ಜಾಗದಲ್ಲಿ ಕೃಷಿ ನಡೆಸಬಹುದಾದ ಬೀಜಗಳು, ಒಂದು ವರ್ಷದ ವರೆಗೆ ಕೆಟ್ಟುಹೋಗದಂತೆ ಬಳಸಬಹುದಾದ ಗ್ರಾಮೀಣ ಶೈಲಿಯ(ಪರಂಪರಾಗತ) ಔಷಧಗಳು ಹೊಂದಿರುವ ಕಿಟ್ ಇಲ್ಲಿ ಲಭ್ಯವಿದೆ.
ಕಾಞಂಗಾಡ್ ಬ್ಲಾಕ್ ಅಗ್ರೋ ಸರ್ವೀಸ್ಸ ಎಂಟರ್ ನೇತೃತ್ವದಲ್ಲಿ ಕೃಷಿ ಕಾಯಕ ಉಪಕರಣಗಳು, ಮನೆಯ ಬಳಕೆ ಉಪಕರಣೆಗಳು ಇತ್ಯಾದಿ ಪ್ರದರ್ಶನದಲ್ಲಿವೆ. ನೀಲೇಶ್ವರ ಬ್ಲೋಕ್ ವತಿಯಿಂದ ಅಣಬೆ ಬೀಜ, ಕೃಷಿ ಸಂಬಂಧ ಪ್ರದರ್ಶನ, ಕಾರಡ್ಕ ಬ್ಲೋಕ್ ವತಿಯಿಂದ ಹಾಳೆಯ ಮುಟ್ಟಾಳೆ, ಪಾತ್ರೆ, ಕಲಾಕೃತಿಗಳು ಸಹಿತ ಉತ್ಪನ್ನಗಳು, ಪರಪ್ಪ ಬ್ಲೋಕ್ ವತಿಯಿಂದ ಯಶಸ್ವಿ ಯೋಜನೆಗಳ ಮಾದರಿ ಪ್ರದರ್ಶನಗಳು ಇಲ್ಲಿದ್ದು, ಕೃಷಿ, ಗ್ಯಾಸ್ ಪ್ಲಾಟ್, ಗೋಶಾಲೆ, ಮೇಕೆ ಗೂಡು ಸಹಿತದ ಮನೆಯ ಮಾದರಿ ಇಲ್ಲಿ ಆಕರ್ಷಕವಾಗಿದೆ. ಮಣ್ಣು ಸಂರಕ್ಷಣೆಯ ಮಾದರಿ ನವಕೇರಳ ನಿರ್ಮಾಣ ಸಂಕಲ್ಪಕ್ಕೆ ಪೂರಕವಾಗಿದೆ.


