ಕುಂಬಳೆ: ಒಡಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸಾಫ್ಟ್‍ಬಾಲ್ ಪಂದ್ಯಾಟದಲ್ಲಿ ಕೇರಳವನ್ನು ಪ್ರತಿನಿಧೀಕರಿಸುವ ತಂಡಕ್ಕೆ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯ ಸಿ.ಎಚ್. ಆಯ್ಕೆಯಾಗಿದ್ದಾಳೆ.
ಅಕ್ಟೋಬರ್‍ನಲ್ಲಿ ಎರ್ನಾಕುಳಂನಲ್ಲಿ ನಡೆದ 24ನೇ ರಾಜ್ಯಮಟ್ಟದ ಸಬ್‍ಜ್ಯೂನಿಯರ್ ಹೆಣ್ಮಕ್ಕಳ ಸಾಫ್ಟ್‍ಬಾಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕೇರಳವನ್ನು ಪ್ರತಿನಿಧೀಕರಿಸುವ ತಂಡದಲ್ಲಿ ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾದ ಏಕ ವಿದ್ಯಾರ್ಥಿನಿಯೂ ಈಕೆಯಾಗಿದ್ದಾಳೆ. ಉಳಿದಂತೆ ತಂಡದಲ್ಲಿ ಮಲಪ್ಪುರ, ಕೋಟ್ಟಯಂ, ತಿರುವನಂತಪುರ, ಕೊಲ್ಲಂ, ಆಲಪ್ಪುಯ, ಪಾಲ್ಘಾಟ್, ಪತ್ತನಂತಿಟ್ಟ, ತೃಶ್ಶೂರು, ಎರ್ನಾಕುಳಂ ಹಾಗೂ ಕಣ್ಣೂರಿನ ವಿದ್ಯಾರ್ಥಿನಿಯರಿದ್ದಾರೆ. ಪತ್ತನಂತಿಟ್ಟದಲ್ಲಿ ನಡೆಯುವ ಅರ್ಹತಾ ತರಬೇತಿಗಾಗಿ ಈಗ ತೆರಳಿದ್ದಾಳೆ. ಈಕೆ ಕನಿಯಾಲದ ಸುಂದರ ಎಸ್. ಹಾಗೂ ಕಮಲ ದಂಪತಿಯ ಪುತ್ರಿ.
ಈಕೆಯ ಸಾಧನೆಯನ್ನು ಶಾಲಾ ಪ್ರಬಂಧಕ ಎನ್.ಶಂಕರನಾರಾಯಣ ಭಟ್, ಮುಖ್ಯೋಪಾಧ್ಯಾಯ ಇ.ಎಚ್.ಗೋವಿಂದ ಭಟ್, ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದೆ.


