ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ರಜತ ಸಂಭ್ರಮ, 25ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪ ದೀಪೋತ್ಸವವು ಭಾನುವಾರ ಬೆಳಗಿನ ಜಾವ ಸಂಪನ್ನವಾಯಿತು.
ಶನಿವಾರ ರಾತ್ರಿ ವೈಭವದ ಪಾಲಕೊಂಬು ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಮಾನ್ಯ ದೇವರಕೆರೆ ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಸನ್ನಿಧಿಯಲ್ಲಿ ಸಾನ್ನಿಧ್ಯ ಶಕ್ತಿಗಳಿಗೆ ತಂಬಿಲ ಸೇವೆ ಜರಗಿ, ಹಾಲೆಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಮೆರವಣಿಗೆ ಪ್ರಾರಂಭವಾಗಿತ್ತು. ಗೊಂಬೆಕುಣಿತ, ಮುತ್ತುಕೊಡೆ, ಸಿಂಗಾರಿ ಮೇಳ, ವಾದ್ಯಘೋಷಗಳು ಮೆರವಣಿಗೆಗೆ ವಿಶೇಷ ಶೋಭೆಯನ್ನು ತಂದಿತು. ಪುಟಾಣಿಗಳು ಹಣತೆಯೊಂದಿಗೆ ಪಾಲ್ಗೊಂಡಿದ್ದರು. ಮಾನ್ಯ ಪೇಟೆಯಲ್ಲಾಗಿ ಸಾಗಿ ಮೆರವಣಿಗೆಯು ಶ್ರೀಮಂದಿರ ತಲುಪಿತು. ದಾರಿಯುದ್ದಕ್ಕೂ ಭಕ್ತಾದಿಗಳು ಮೆರವಣಿಗೆಯನ್ನು ಬರಮಾಡಿಕೊಂಡರು.
ರಾತ್ರಿ ಮಹಾಪೂಜೆ, ಅನ್ನದಾನ ಜರಗಿತು. ಜೂನಿಯರ್ ಜೇಸುದಾಸ್ ಖ್ಯಾತಿಯ ರತೀಶ್ ಕಂಡಡ್ಕಂ ಮುನ್ನಡೆಸಿದ `ದೇವಗೀತಂ' ಭಕ್ತಿಗಾನಮೇಳ, ನಾಡನ್ ಪಾಟ್ಟ್‍ಗಳ ಮೆಘಾ ಶೋ ಜನಮೆಚ್ಚುಗೆಯನ್ನು ಪಡೆಯಿತು. ಭಾನುವಾರ ಬೆಳಗಿನ ಜಾವ ಅಯ್ಯಪ್ಪನ್ ಗೀತೆ, ಬೇಟೆವಿಳಿ, ತಾಲಪ್ಪೊಲಿ, ಅಗ್ನಿಪೂಜೆ, ತಿರಿಉಯಿಚ್ಚಿಲ್, ಅಯ್ಯಪ್ಪನ್ ವಾವರ ಯುದ್ಧ, ಅಯ್ಯಪ್ಪನ್ ತಿರುವಿಳಕ್ಕ್ ಹಾಗೂ ದೀಪೋದ್ವಾಸನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


