ಬದಿಯಡ್ಕ: ಜನವರಿ 22ರಿಂದ ಫೆ.3ರ ತನಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರಗಲಿರುವ ಬ್ರಹ್ಮಕಲಶ ಮಹೋತ್ಸವ ಸಂದರ್ಭದಲ್ಲಿ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲಿರುವ ಕೋಟಿಜಪಯಜ್ಞ ಪ್ರಯುಕ್ತ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಕಟೀಲು ಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣ ಅವರು ಜಪಯಜ್ಞ ಸಂಕಲ್ಪವನ್ನು ನಡೆಸಿ ಮಹತ್ವವನ್ನು ತಿಳಿಸಿ ಉಪದೇಶಿಸಿದರು.
ಜನವರಿ 24ರಂದು ವಿಶೇಷವಾದ ಸುವರ್ಣ ಧ್ವಜ ಸ್ಥಂಭ ಪ್ರತಿಷ್ಠೆ, ಪೆ.1ರಂದು ನಾಗಮಂಡಲೋತ್ಸವ, 2ರಂದು ಕೋಟಿ ಜಪಯಜ್ಞ, 3ರಂದು ಸಹಸ್ರಚಂಡಿಕಾ ಯಾಗ ಜರಗಲಿರುವುದಾಗಿ ತಿಳಿಸಿದ ಅವರು ಎಲ್ಲ ಭಗವದ್ಭಕ್ತರಿಗೂ ಈ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಜಪಸೇವೆಯನ್ನು ಕೈಗೊಂಡು ಶ್ರೀ ಕಟೀಲು ಕ್ಷೇತ್ರಕ್ಕೆ ಯಾವುದೇ ದಿನಗಳಲ್ಲಿ ಆಗಮಿಸಿ ಸೇವೆಯನ್ನು ಅರ್ಪಿಸಿ ಶ್ರೀ ದೇವಿಯ ಪ್ರಸಾದವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿ ಬ್ರಹ್ಮಕಲಶ ಮಹೋತ್ಸವಕ್ಕೆ ಎಲ್ಲರನ್ನೂ ಆಮಂತ್ರಿಸಿದರು.
ಕುಮಾರಮಂಗಲ ಕ್ಷೇತ್ರದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಡಿ. ರಾಮಕೃಷ್ಣ ಭಟ್, ಗಣರಾಜ ನಿಡುಗಳ, ನಾರಾಯಣ ಶೆಟ್ಟಿ ಬೇಳ ಉಪಸ್ಥಿತರಿದ್ದರು. ಕುಮಾರಮಂಗಲ ಸೇವಾಸಮಿತಿಯ ಕಾರ್ಯದರ್ಶಿ ಶ್ರೀಧರ ಪ್ರಸಾದ ಬೇಳ ಸ್ವಾಗತಿಸಿ, ಮಂಜುನಾಥ ಮಾನ್ಯ ವಂದಿಸಿದರು. 100ಕ್ಕೂ ಹೆಚ್ಚುಮಂದಿ ಭಕ್ತಾದಿಗಳು ಜಪದೀಕ್ಷೆಯನ್ನು ಪಡೆದುಕೊಂಡರು.


