ಬದಿಯಡ್ಕ: ಓರ್ವ ಅಧ್ಯಾಪಕನು ವೃತ್ತಿಯಿಂದ ನಿವೃತ್ತಿಯನ್ನು ಹೊಂದಿದರೂ ಆತ ಜೀವಮಾನಪೂರ್ತಿ ಅಧ್ಯಾಪಕನೇ ಆಗಿರುತ್ತಾನೆ. 22 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಗುರುಸ್ಥಾನದಲ್ಲಿ ನಿಂತು ದಾರಿದೀಪವಾದ ಮಾಲತಿಯವರ ಸೇವೆ ಸದಾ ಸ್ಮರಣೀಯ ಎಂದು ಚಿನ್ಮಯ ಮಿಶನ್ ಕೇರಳ ರಾಜ್ಯ ಮುಖ್ಯಸ್ಥ ಶ್ರೀ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು.
ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿಯನ್ನು ಪಡೆಯುತ್ತಿರುವ ಅಧ್ಯಾಪಿಕೆ ಮಾಲತಿ ಜಿ.ಪೈ ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಹಿರಿಯರಾದ ಪಿಲಿಂಗಲ್ಲು ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ನೀಡುವ ಪ್ರೀತಿ, ಗೌರವಕ್ಕಿಂತ ಮಿಗಿಲಾದುದು ಓರ್ವ ಅಧ್ಯಾಪಕನಿಗೆ ಬೇರೇನೂ ಇಲ್ಲ. ನಿವೃತ್ತಿಯ ನಂತರವೂ ಸಂಸ್ಥೆಗೆ ಅವರ ಮಾರ್ಗದರ್ಶನದ ಅಗತ್ಯವಿದೆ ಎಂದರು. ಕಾರ್ಯದರ್ಶಿ ಜ್ಞಾನದೇವ ಶೆಣೈ ಬದಿಯಡ್ಕ ಮಾತನಾಡಿ ಗೃಹಿಣಿಯಾಗಿ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರೊಂದಿಗೆ ಮಾಲತಿ ಪೈ ಅವರು ಅಧ್ಯಾಪಿಕೆಯಾಗಿಯೂ ಉನ್ನತ ಸಾಲಿನಲ್ಲಿ ನಿಲ್ಲುವಂತಹ ಸಾಧನೆಯನ್ನು ಮಾಡಿದ್ದಾರೆ ಎಂಬುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದರು. ಶಾಲಾ ಪ್ರಾಂಶುಪಾಲ ಪ್ರಶಾಂತ್ ಬೆಳಿಂಜ ಶುಭಹಾರೈಸಿ ಮಾತನಾಡುತ್ತಾ ಶಾಲೆಯನ್ನು ಸಮರ್ಪಕವಾಗಿ ಮುನ್ನಡೆಸುವಲ್ಲಿ ಅವರ ಪಾತ್ರವಿದೆ ಎಂದರು. ಸಹ ಅಧ್ಯಾಪಿಕೆ ವಸಂತಿ, ವಿದ್ಯಾರ್ಥಿನಿ ತನುಶ್ರೀ ಭಟ್ ಶುಭಕೋರಿದರು. ವಿದ್ಯಾರ್ಥಿ ಆಶಿತ್ ರಾವ್ ನಿರೂಪಿಸಿದನು.

