ಬದಿಯಡ್ಕ: ದೇವಸ್ಥಾನ, ಮಂದಿರಗಳು ಕೇವಲ ಉತ್ಸವ, ಸಂಭ್ರಮಗಳಿಗಷ್ಟೇ ಸೀಮಿತವಾಗದೆ ಸಮಾಜಕ್ಕೆ ಶಕ್ತಿಕೇಂದ್ರವಾಗಿ ಬೆಳಗಿ ವ್ಯಕ್ತಿ ನಿರ್ಮಾಣ ಕಾರ್ಯವನ್ನು ಮಾಡಿದರೆ ರಾಷ್ಟ್ರೋನ್ನತಿ, ಆತ್ಮೋನ್ನತಿ ಆಗುತ್ತದೆ. ಜಗತ್ತಿನಲ್ಲಿ ಭಾರತ ಎತ್ತರಕ್ಕೇರುತ್ತಿದ್ದರೆ ಭಾರತದೊಳಗಿರುವ ಅನೇಕ ಸಂಸ್ಕಾರ ಹೀನರಿಂದ ಹಿಂಸಾಚಾರ, ಅನಾಚಾರಗಳು ನಡೆಯುತ್ತಿದೆ. ಸನಾತನ ಹಿಂದು ಧರ್ಮ, ಧಾರ್ಮಿಕ ಶ್ರದ್ಧಾಕೇಂದ್ರದ ಮೇಲೆ ನಿರಂತರ ಆಕ್ರಮಣಗಳು ಎದುರಾಗಿರುವಾಗ ದೇವರ ಭಕ್ತರಾಗಿ ನಾವೆಲ್ಲ ಸಂಘಟಿತರಾಗಿರಬೇಕಾಗಿದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ನುಡಿದರು.
ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾ ಸಂಘದ `ರಜತ ಸಂಭ್ರಮ' 25ನೇ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವದ ಧಾರ್ಮಿಕ ಸಭೆಯನ್ನು ಶನಿವಾರ ಬೆಳಿಗ್ಗೆ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 25 ವರ್ಷಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುತ್ತಾ ಈ ಪರಿಸರಕ್ಕೊಂದು ಶ್ರದ್ಧಾ ಕೇಂದ್ರವಾಗಿ ಬೆಳೆದ ಈ ಮಂದಿರದ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಅತ್ಯಂತ ಪುಣ್ಯಾತ್ಮರು. ದೇವಸ್ಥಾನ, ದೇವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ನಾವೆಲ್ಲಾ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಮ್ಮ ಆತ್ಮೊದ್ಧಾರದ ಪಥವನ್ನು ಕಂಡುಕೊಳ್ಳಲು ಅವಕಾಶ ಸಿಕ್ಕಿದೆ. ಮನುಷ್ಯತ್ವದಿಂದ ಮಾಧವತ್ವದೆಡೆಗೆ ಜನರು ಸಾಗಬೇಕಾಗಿದೆ. ಸಮುದ್ರದಲ್ಲಿ ಸಂಚರಿಸುವ ನಾವೆಗಳಿಗೆ ದಡದಲ್ಲಿರುವ ಲೈಟ್ ಹೌಸ್ ಹೇಗೆ ದಿಕ್ಕನ್ನು ತೋರಿಸುತ್ತದೆಯೋ ಹಾಗೆಯೇ ಧಾರ್ಮಿಕ ಶ್ರದ್ಧಾಕೇಂದ್ರಗಳು ನಮ್ಮಗುರಿಯಾಗಬೇಕು. ಧರ್ಮದ ಆಚರಣೆಯು ಅತ್ಯಂತ ಕಠಿಣವಾಗಿದ್ದರೂ ಆ ದಾರಿಯನ್ನು ಆಯ್ಕೆ ಮಾಡಿಕೊಂಡು ದೇವರ ಪ್ರೀತಿಯನ್ನು ಸಂಪಾದಿಸುವ ಪ್ರಯತ್ನ ಮಾಡಿದವರಿಗೆ ಭಗವಂತ ಸುಲಭದಲ್ಲಿ ಒಲಿಯುತ್ತಾನೆ. ಭಗವಂತನನ್ನು ಸೇರುವ ಲಕ್ಷ್ಯವಿಟ್ಟುಕೊಂಡು ನಾವೆಲ್ಲಾ ಭಕ್ತಿಮಾರ್ಗದಲ್ಲಿ ಮುಂದುವರಿದಾಗ ನಮ್ಮ ಹೃದಯ ಪರಿಶುದ್ಧವಾಗುತ್ತದೆ. ತನ್ಮೂಲಕ ಭಗವಂತನ ದಿವ್ಯ ಸಾನಿಧ್ಯ ನಮ್ಮೊಳಗೆ ಸ್ಥಿರಗೊಳ್ಳುತ್ತದೆ. ಬಾಳಿನಲ್ಲಿ ಸದಾ ಸತ್ಕರ್ಮಗಳಿಂದ ತೊಡಗಿಕೊಳ್ಳುವ ಮೂಲಕ ಭಗವಂತ ನಮ್ಮನ್ನು ಅನುಗ್ರಹಿಸುತ್ತಾನೆ ಎಂದರು.
ಡಿ.ಎನ್.ಮಾನ್ಯ ಕಾರ್ಕಳ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ರಾಜಕೀಯ ಲಾಭಕ್ಕಾಗಿ ಕೇರಳ ರಾಜ್ಯವು ಇಂದು ಅಧಾರ್ಮಿಕತೆಯತ್ತ ಸಾಗುತ್ತಿದೆ. ನಮ್ಮ ಸಂಸ್ಕಾರದ ಕೊರತೆಯಿಂದ ಅನ್ಯ ಸಮಾಜದವರು ನಮ್ಮ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ. ನಮ್ಮ ಆಚಾರ ಪದ್ಧತಿಯನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನಾವು ಮನಗಾಣಬೇಕಾಗಿದೆ ಎಂದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಪೈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜನಪ್ರತಿನಿಧಿಗಳಾದ ಕೆ.ಎನ್.ಕೃಷ್ಣಭಟ್, ನ್ಯಾಯವಾದಿ ಕೆ.ಶ್ರೀಕಾಂತ್, ಶ್ಯಾಮಪ್ರಸಾದ ಮಾನ್ಯ, ಅವಿನಾಶ್ ರೈ, ರಾಜೇಶ್ವರಿ ಮಾನ್ಯ, ಧ.ಗ್ರಾ.ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ, ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಕುಂಞÂಕಣ್ಣ ಗುರುಸ್ವಾಮಿ ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಹಿರಿಯರಾದ ಅರ್ಚಕ ಸುಬ್ರಹ್ಮಣ್ಯ ಭಟ್ ಕಂಬಾರು, ಕೇರಳ ರಾಜ್ಯಮಟ್ಟದ ಅತ್ಯುತ್ತಮ ವೈದ್ಯ ಪ್ರಶಸ್ತಿಪುರಸ್ಕøತ ಡಾ. ಜನಾರ್ಧನ ನಾಯ್ಕ್, ಎಂ.ಎ.ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ವಂದನಾ ಸಿ.ಎಚ್. ಇವರಿಗೆ ಗೌರವಾರ್ಪಣೆ ನಡೆಯಿತು. ಶಮಾ ವಿ.ಎಂ. ಪ್ರಾರ್ಥನೆಯನ್ನು ಹಾಡಿದರು. ನವೀನಚಂದ್ರ ಎಂ.ಎಸ್.ಮಾನ್ಯ ನಿರೂಪಿಸಿದರು. ಶ್ರೀ ಅಯ್ಯಪ್ಪ ಸೇವಾಸಂಘದ ಅಧ್ಯಕ್ಷ ವೆಂಕಪ್ಪನಾಯ್ಕ ಕೆ. ಚುಕ್ಕಿನಡ್ಕ ಸ್ವಾಗತಿಸಿ, ಉತ್ಸವ ಸಮಿತಿಯ ಪ್ರ.ಕಾರ್ಯದರ್ಶಿ ಮಹೇಶ್ ವಳಕ್ಕುಂಜ ವಂದಿಸಿದರು.

