ಕಾಸರಗೋಡು: ಮಾರಕ ಕೀಟನಾಶಕ ಎಂಡೋಸಲ್ಫಾನ್ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಕಾರ್ಯ ಇನ್ನೂ ಆರಂಭಗೊಳ್ಳದಿರುವುದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ತಳ್ಳಿದೆ. ಎಂಡೋಸಲ್ಫಾನ್ ಮಾರಕ ಕೀಟನಾಶಕವನ್ನು ದಾಸ್ತಾನಿರಿಸಿರುವ ಹೈ ಡೆನ್ಸಿಟಿ ಪೋಲಿಎಥೆಲಿನ(ಎಚ್‍ಡಿಪಿಇ)ಬ್ಯಾರಲ್‍ಗಳ ಕಾಲಾವಧಿ ಈಗಾಗಲೇ ಕಳೆದಿದ್ದು, ಮತ್ತೆ ಸೋರಿಕೆ ಕಂಡುಬರುವ ಭೀತಿ ಎದುರಾಗಿದೆ.
ಬ್ಯಾರೆಲ್‍ಗೆ ವಿಶ್ವ ಸಂಸ್ಥೆ ಅಂಗೀಕರಿಸಿರುವ ಕಾಲಾವಧಿ ಮುಕ್ತಾಯಗೊಂಡು ಹಲವು ವರ್ಷಗಳು ದಾಟಿದರೂ, ಸರ್ಕಾರ ಮಾತ್ರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ. ಕಾಸರಗೋಡು ಜಿಲ್ಲೆ ಹಾಗೂ ಮಣ್ಣಾರ್‍ಕಾಡ್ ತೋಟಗಾರಿಕಾ ನಿಗಮದ ವಿವಿಧ ಗೋದಾಮುಗಳಲ್ಲಿ ದಾಸ್ತಾನಿರಿಸಿದ್ದ ಒಟ್ಟು 1900ಲೀ. ಎಂಡೋಸಲ್ಫಾನ್ ಕೀನಾಶಕವನ್ನು 2012ರಲ್ಲಿ ಎಚ್‍ಡಿಪಿಇ ಬ್ಯಾರೆಲ್‍ಗಳಿಗೆ ಸ್ಥಳಾಂತರಿಸಲಾಗಿತ್ತು. ಅದುವರೆಗೆ ಎಂಡೋಸಲ್ಫಾನನ್ನು ಕಬ್ಬಿಣದ ಬ್ಯಾರೆಲ್‍ಗಳಲ್ಲಿ ದಾಸ್ತಾನಿರಿಸಲಾಗಿತ್ತು.
ಪ್ರಸಕ್ತ ಎಚ್.ಡಿ.ಪಿ.ಇ ಬ್ಯಾರೆಲ್‍ಗಳಲ್ಲಿರುವ ಎಂಡೋಸಲ್ಫಾನ್ ಕೀಟನಾಶಕ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಎಷ್ಟು ಸಮಯದ ವರೆಗೆ ಉಳಿದುಕೊಳ್ಳಬಹುದು ಎಂಬ ಬಗ್ಗೆ ಅಧಿಕಾರಿಗಳಲ್ಲೇ ಗೊಂದಲವಿದೆ.
ಬ್ಯಾರೆಲ್‍ಗಳನ್ನು ಬದಲಾಯಿಸಿ ನೀಡುವುದಾಗಿ ಕೊಚ್ಚಿಯ ಹಿಂದೂಸ್ಥಾನ್ ಇನ್‍ಸೆಕ್ಟಿಸೈಡ್ ಲಿಮಿಟೆಡ್(ಎಚ್.ಐ.ಎಲ್)ನ ಅಧಿಕಾರಿಗಳು ಭರವಸೆ ನೀಡಿದ್ದರೂ, ಈ ಬಗ್ಗೆ ಜಿಲ್ಲಾ ಆಡಳಿತ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಸರಗೋಡು ಜಿಲ್ಲೆಯ ವಿವಿಧ ಎಸ್ಟೇಟ್‍ಗಳಲ್ಲಿ ಕಬ್ಬಿಣದ ಬ್ಯಾರೆಲ್‍ಗಳಲ್ಲಿ ದಾಸ್ತಾನಿರಿಸಿದ್ದ ಎಂಡೋಸಲ್ಫಾನ್‍ನಲ್ಲಿ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸುರಕ್ಷಿತ ಬ್ಯಾರೆಲ್‍ಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗಿತ್ತು. ಹಳೇ ಬ್ಯಾರೆಲ್‍ಗಳಿಂದ ಎಚ್.ಡಿ.ಪಿ.ಇ ಬ್ಯಾರೆಲ್‍ಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಆಪರೇಶನ್ ಬ್ಲಾಸಮ್ ಎಂಬುದಾಗಿ ಹೆಸರನ್ನಿರಿಸಲಾಗಿತ್ತು. ಎಂಡೋಸಲ್ಫಾನನ್ನು ನಿಷ್ಕ್ರಿಯಗೊಳಿಸುವ ಕಾರ್ಯ ಒಂದಲ್ಲ ಒಂದು ಕಾರಣದಿಂದ ವಿಳಂಬವುಂಟಾಗಿರುವುದರಿಂದ ಬ್ಯಾರೆಲ್‍ಗಳಲ್ಲಿರುವ ಎಂಡೋಸಲ್ಫಾನ್ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಎಂಡೋಸಲ್ಫಾನನ್ನು ರಾಜ್ಯದಿಂದ ಹೊರಕ್ಕೆ ಸಾಗಿಸಿ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಸಿವು ಬಗ್ಗೆ ಕರೆಯಲಾಗಿದ್ದ ಇ-ಟೆಂಡರ್‍ಗೆ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ.
ಕೊಚ್ಚಿಯ ಸಂಸ್ಥೆಯೊಂದು ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸಲು ಗುತ್ತಿಗೆ ವಹಿಸಿಕೊಂಡಿದ್ದು, ನಿಷ್ಕ್ರಿಯಗೊಳಿಸಿದ ಎಂಡೋಸಲ್ಫಾನನ್ನು ನಾಶಗೊಳಿಸುವ ಬಗ್ಗೆ ಜನರ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಕೊಚ್ಚಿ ಜಿಲ್ಲಾಡಳಿತ ಇದಕ್ಕೆ ತನ್ನ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎಂಡೋ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಮತ್ತೆ ಸ್ಥಗಿತಗೊಳ್ಳುವಂತಾಗಿದ್ದು, ಮಾರಕ ಎಂಡೋ ಕೀಟನಾಶಕ ಬ್ಯಾರಲ್‍ಗಳಲ್ಲಿ ಉಳಿದುಕೊಳ್ಳುವಂತಾಗಿತ್ತು.
ಮತ್ತೆ ಯತ್ನ:
ಎಂಡೋಸಲ್ಫಾನ್ ಕೀಟನಾಶಕವನ್ನು ವೈಜ್ಞಾನಿಕ ರೀತಿಯಲ್ಲಿ ನಾಶಗೊಳಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದ್ದು, ಜಿಲ್ಲೆಯಲ್ಲೇ ಇದನ್ನು ನಡೆಸುವ ಯತ್ನ ನಡೆಸಲಾಗುತ್ತಿದೆ.ಜಿಲ್ಲೆಯ ಗೋದಾಮುಗಳಲ್ಲಿ ಸಂಗ್ರಹಿಟ್ಟಿರುವ ಎಂಡೋಸಲ್ಫಾನನ್ನು ಪಡನ್ನಕ್ಕಾಡ್ ಕೃಷಿಕಾಲೇಜಿನಲ್ಲಿ ನಿಷ್ಕ್ರಿಯಗೊಳಿಸುವ ಕಾರ್ಯಕ್ಕೆ ಚಿಂತನೆ ನಡೆಸಲಾಗಿದ್ದು, ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.

