ಕಾಸರಗೋಡು: ಕ್ರೀಡೆಗಳ ಮೂಲಕ ಐಕ್ಯತೆ, ಸಹೋದರತೆ ಅಖಂಡತೆಯನ್ನು ಮೆರೆಯಲು ಸಾಧ್ಯ. ಮನುಷ್ಯ ಜೀವನದ ಅತ್ಯಂತ ಪ್ರಮುಖ ಘಟಕ ಕ್ರೀಡೆ. ಅದು ಶರೀರ ಹಾಗು ಮನಸ್ಸನ್ನು ಸಮಸ್ಥಿತಿಯಲ್ಲಿರಿಸಲು ನೆರವಾಗುವುದು ಎಂದು ಕೇರಳ ಕ್ರಿಕೆಟ್ ಅಸೋಸಿಯೇಶನ್ ಕೋಶಾಧಿಕಾರಿ ಕೆ.ಎಂ.ಅಬ್ದುಲ್ ರಹಮಾನ್ ಅಭಿಪ್ರಾಯಪಟ್ಟರು.
ಕಾಸರಗೋಡು ಚಿನ್ಮಯ ವಿದ್ಯಾಲಯದ 2019-20 ರ ವಾರ್ಷಿಕ ಕ್ರೀಡಾ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿನ್ಮಯ ವಿದ್ಯಾಲಯವು ಪಠ್ಯದೊಂದಿಗೆ ಕ್ರೀಡಾ ಕ್ಷೇತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ನಾವು ಕ್ರೀಡಾಂಗಣದಲ್ಲಿ ಕಾಲಿಟ್ಟಾಗ ಗುಂಪಿನೊಂದಿಗೆ ಸಹಕಾರವನ್ನೂ, ಐಕ್ಯತೆಯನ್ನೂ, ನಮ್ಮ ಶಾಲೆಯ, ರಾಜ್ಯದ ಅಥವಾ ದೇಶದ ಹೆಸರನ್ನು ಮತ್ತೆ ಮತ್ತೆ ಘೋಷಿಸಬೇಕೆನ್ನುವುದನ್ನೂ ಬಯಸುತ್ತೇವೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ, ಕ್ರೀಡೆಗಳನ್ನು ವೀಕ್ಷಿಸುವುದರಿಂದ ಪರಸ್ಪರ ಸ್ನೇಹ, ಸೌಹಾರ್ದತೆಯನ್ನು ಬೆಳೆಸಲು ಸಾಧ್ಯವಾಗುವುದು ಎಂದರು.
ವಿದ್ಯಾಲಯದ ವಿದ್ಯಾರ್ಥಿ ನಾಯಕ ಅಖಿಲೇಶ್ ಶಶೀಂದ್ರನ್ ಸ್ವಾಗತಿಸಿದರು. ಸಹ ನಾಯಕಿ ಆಯಿಷತ್ ಹುದಾ ವಂದಿಸಿದರು. ವಿವಿಧ ಗುಂಪಿನ ವಿದ್ಯಾರ್ಥಿಗಳು ಪಥ ಸಂಚಲನಗೈದು ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಅವರಿಗೆ ವಂದನೆ ಸಲ್ಲಿಸಿದರು. ಕ್ರೀಡಾಪಟುಗಳು ಧ್ವಜವಂದನೆ ಸಲ್ಲಿಸಿ ಪ್ರತಿಜ್ಞೆ ಸ್ವೀಕರಿಸಿದರು.


