ಕಾಸರಗೋಡು: ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಲು 21 ದಿನಗಳ ಗಡುವು ವಿ„ಸುವ ಆಂಧ್ರ ಪ್ರದೇಶ ಸರಕಾರ ರೂಪು ನೀಡಿದ ಕಾನೂನನ್ನು ಕೇರಳದಲ್ಲೂ ರೂಪು ನೀಡಿ ಜಾರಿಗೊಳಿಸುವ ವಿಷಯ ಪರಿಶೀಲನೆಯಲ್ಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಸಚಿವೆ ಕೆ.ಕೆ.ಶೈಲಜ ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ವಿ„ಸುವ ಪ್ರಸ್ತಾವವೂ ಆಂಧ್ರ ಪ್ರದೇಶ ರೂಪು ನೀಡಿದ ಹೊಸ ಕಾನೂನಿನಲ್ಲಿ ಒಳಗೊಂಡಿದೆ. ಪ್ರಸ್ತಾವಿಕ ಹೊಸ ಕಾನೂನಿಗೆ ಆಂಧ್ರ ಪ್ರದೇಶದ ದಿಶಾ ಕಾಯ್ದೆಯ ಕ್ರಿಮಿನಲ್ ಕಾನೂನು (ಎ.ಪಿ.ತಿದ್ದುಪಡಿ)-2019 ಎಂದು ಹೆಸರಿಲಾಗಿದೆ. ಅಂತಹ ಕ್ರಾಂತಿಕಾರಿ ಕಾನೂನನ್ನು ಕೇರಳದಲ್ಲಿ ಜಾರಿಗೊಳಿಸುವ ವಿಷಯ ಸರಕಾರದ ಪರಿಗಣನೆಯಲ್ಲಿದೆ.
ಅತ್ಯಾಚಾರ, ಮಕ್ಕಳ ಮೇಲೆ ದೌರ್ಜನ್ಯ ಇತ್ಯಾದಿ ಅಪರಾಧ ಪ್ರಕರಣಗಳಿಗೆ ಕಠಿಣ ಶಿಕ್ಷೆ ಲಭಿಸುವಂತೆ ಕಾನೂನು ಕೇರಳದಲ್ಲಿ ಈಗಾಗಲೇ ಇದೆ. ಆದರೂ ಇಂತಹ ಅಪರಾಧ ಕೃತ್ಯಗಳು ಕಡಿಮೆಯಾಗಿಲ್ಲ. ಅದರಿಂದಾಗಿ ಅದರ ವಿರುದ್ಧ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಸಂಬಂಧ ಆಂಧ್ರದ ದಿಶಾ ರೀತಿಯ ಕಾನೂನನ್ನು ಕೇರಳದಲ್ಲಿ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಹೊಸ ಕಾನೂನಿನ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ. ಅಧ್ಯಯನ ವರದಿ ಕೈಸೇರಿದ ಬಳಿಕ ಈ ವಿಷಯದಲ್ಲಿ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಪಶು ವೈದ್ಯೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಉಸಿರುಗಟ್ಟಿಸಿ ಕೊಲೆಗೈದು, ದೇಹದ ಮೇಲೆ ಸೀಮೆ ಎಣ್ಣೆ ಸುರಿದು ಕಿಚ್ಚಿರಿಸಿದ ಹೇಯ ಕೃತ್ಯದ ಹಿನ್ನೆಲೆಯಲ್ಲಿ ಆಂಧ್ರ ಸರಕಾರ ಇಂತಹ ಹೊಸ ಕಾನೂನಿಗೆ ರೂಪು ನೀಡಿದೆ. ಈ ಕಾಯ್ದೆ ಪ್ರಕಾರ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ದೂರು ನೀಡಲಾದ ಏಳು ದಿನಗಳಲ್ಲಿ ಪೆÇಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಬಳಿಕ ನ್ಯಾಯಾಲಯ 14 ದಿನಗಳೊಳಗೆ ವಿಚಾರಣೆ ಪೂರ್ತಿಗೊಳಿಸಿ ತೀರ್ಪು ನೀಡಬೇಕು. ಒಟ್ಟು 21 ದಿನಗಳೊಳಗೆ ಪ್ರಕರಣ ಇತ್ಯರ್ಥಗೊಳ್ಳಬೇಕು. ಮಾತ್ರವಲ್ಲ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ತೀರ್ಮಾನವನ್ನು ಆಂಧ್ರ ಸರಕಾರ ಕೈಗೊಂಡಿದೆ. ಅದೇ ರೀತಿಯ ಕಾನೂನು ಕೇರಳದಲ್ಲಿ ಜಾರಿಗೊಳಿಸುವ ಹಾಗಿದ್ದಲ್ಲಿ ಅದಕ್ಕೆ ಹೊಂದಿಕೊಂಡು ಅಂತಹ ಪ್ರಕರಣಗಳ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳನ್ನು ಆರಂಭಿಸಬೇಕಾಗಿ ಬರಲಿದೆ.

