ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಂಗಳವಾರ ರಾತ್ರಿ ನಡೆದ ಬಲಿಪೂಜೆಯನ್ನು ಧರ್ಮಗುರು ಫಾದರ್ ಐವನ್ ಡಿ'ಮೆಲ್ಲೊ ನೆರವೇರಿಸಿದರು. ರಾಂಚಿ ಸಂತ ಆಲ್ಬಟ್ರ್ಸ್ ಕಾಲೇಜಿನ ಅಧ್ಯಕ್ಷ ಫಾದರ್ ಜೋನ್ ಕ್ರಾಸ್ತ ಉಪಸ್ಥಿತರಿದ್ದರು.
ಕ್ರಿಸ್ಮಸ್ ಹಬ್ಬದಂಗವಾಗಿ ಕ್ಯಾರಲ್ಸ್ ಗಾಯನ ಹಾಡಲಾಯಿತು. ರಂಗು, ರಂಗಿನ ನಕ್ಷತ್ರಗಳು, ಗೋದಲಿ ಸಂಭ್ರಮಕ್ಕೆ ಮೆರುಗು ನೀಡಿದವು. ದಿವ್ಯಬಲಿ ಪೂಜೆ ಸಂದರ್ಭದಲ್ಲಿ ಬಾಲಯೇಸುವನ್ನು ನಮಿಸಿ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು. ಮಹಿಮಾ ಗೀತೆಯನ್ನು ಹಾಡಿ ಯೇಸುವನ್ನು ಸ್ತುತಿಸಲಾಯಿತು. ಬಲಿಪೂಜೆ ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.


