ಕುಂಬಳೆ: ಮನುಕುಲದ ರಕ್ಷಣೆಗಾಗಿ ಮಾನವನಾಗಿ ಭೂಲೋಕದಲ್ಲಿ ಜನಿಸಿದ ಪ್ರಭು ಯೇಸು ಕ್ರಿಸ್ತರ ಜನ್ಮದಿನವನ್ನು ಮಂಗಳವಾರ ಕ್ರಿಸ್ಮಸ್ ಹಬ್ಬವಾಗಿ ನಾಡಿನೆಲ್ಲಡೆ ಆಚರಿಸಲಾಯಿತು. ಸಾವಿನಿಂದ ಬದುಕಿನತ್ತ, ಸೋಲಿನಿಂದ ಗೆಲುವಿನತ್ತ, ಪಾಪದಿಂದ ಮೋಕ್ಷದತ್ತ, ಅಂಧಕಾರದಿಂದ ಬೆಳಕಿನತ್ತ ಕೊಂಡೊಯ್ದ ಪ್ರಭುಕ್ರಿಸ್ತರ ಹುಟ್ಟುಹಬ್ಬವನ್ನು ನಾಡಿನೆಲ್ಲೆಡೆ ವೈಭವದಿಂದ ಸಂಭ್ರಮಿಸಲಾಯಿತು. ಕ್ರೈಸ್ತರ ಮನೆಗಳಲ್ಲಿ, ದೇವಾಲಯಗಳಲ್ಲಿ, ಅಂಗಡಿಗಳು ಮೊದಲಾದೆಡೆ ರಂಗುರಂಗಿನ ನಕ್ಷತ್ರಗಳು, ಗೋದಲಿಗಳು ಕ್ರಿಸ್ಮಸ್ ಹಬ್ಬವನ್ನು ಸಾರಿ ನುಡಿದವು.
ಪೆರ್ಮುದೆ ಲಾರೆನ್ಸ್ ನಗರದ ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಸಂಭ್ರಮದ ದಿವ್ಯಬಲಿ ಪೂಜೆ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಫಾ.ಬೊನಿಫಾಸ್ ಪಿಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಗರ್ಜಿಯ ಧರ್ಮಗುರು ಫಾ.ಮೆಲ್ವಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ಯಾರೋಲ್ಸ್ ಗಾಯನ ನಡೆಯಿತು. ದಿವ್ಯಬಲಿ ಪೂಜೆ ಸಂದರ್ಭದಲ್ಲಿ ಬಾಲಯೇಸುವನ್ನು ನಮಿಸಿ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು. ಮಹಿಮಾ ಗೀತೆಯನ್ನು ಹಾಡಿ ಯೇಸುವನ್ನು ಸ್ತುತಿಸಲಾಯಿತು. ಕ್ರಿಸ್ಮಸ್ ಹಬ್ಬದ ಅಂಗವಾಗಿ ಐಸಿವೈಎಂ ಪೆರ್ಮುದೆ ಘಟಕ ಏರ್ಪಡಿಸಿದ ಲಕ್ಕಿಡಿಪ್‍ನ ಡ್ರಾ ನಡೆಯಿತು. ಕ್ರಿಸ್ಮಸ್ ಸಂದೇಶ ಸಾರುವ ಸಾಂತಾ ಕ್ಲಾಸ್(ಕ್ರಿಸ್ಮಸ್ ತಾತಾ), ಇಗರ್ಜಿಯ ವಿವಿಧ ಸಂಘಟನೆಗಳ ಕ್ರಿಸ್ಮಸ್ ಸ್ಟಾಲ್‍ಗಳು ಗಮನ ಸೆಳೆದುವು.


