ಕಾಸರಗೋಡು: ಗುರುವಾರ ನಡೆದ ಅಚ್ಚರಿಯ ಸೂರ್ಯಗ್ರಹಣ ವೀಕ್ಷಣೆಗೆ ಚೆರುವತ್ತೂರಿಗೆ ಆಗಮಿಸಿದ್ದ ದೇಶ-ವಿದೇಶಗಳ ವೀಕ್ಷಕರಲ್ಲಿ 77ರ ವೃದ್ಧ, ಅಮೇರಿಕದಲ್ಲಿ ಹೃದ್ರೋಗ ತಜ್ಞ ಡಾ.ಚೌದರಿ ವೊಲೇಟ್ಟಿ ಗಮನ ಸೆಳೆದರು.
ಮೂಲತಃ ಭಾರತೀಯರಾಗಿರುವ ಇವರು ಜನಿಸಿದ್ದು ಆಂಧ್ರಪ್ರದೇಶದ ತಿರುಪತಿಯಲ್ಲಿ. ಕಂಕಣ ಸೂರ್ಯಗ್ರಹಣವನ್ನು ತಮ್ಮ ಕೆಮರದಲ್ಲಿ ಸೆರೆಹಿಡಿಯುವುದು ಮಾತ್ರ ಇವರ ಉದ್ದೇಶವಾಗಿರಲಿಲ್ಲ. ಈ ಸಂಬಂಧ ಯಾವುದೇ ಚಿತ್ರವನ್ನೂ ಸಂಗ್ರಹಿಸುವ ಗುರಿಯನ್ನೂ ಇರಿಸಿಕೊಂಡು ಅವರು ಬಂದಿದ್ದರು. ಒಬ್ಬ ವೈದ್ಯರಾಗಿದ್ದರೂ, ಬಾಹ್ಯಾಕಾಶ ವಿಜ್ಞಾನ ಮತ್ತು ಛಾಯಾಗ್ರಹಣ ಅವರ ಹವ್ಯಾಸವಾಗಿದೆ. ಗ್ರಹಣಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳಿರುವ ಆಲ್ಬಂಗಳು ಇವರ ಬಳಿಯಿದೆ. ಅಮೆರಿಕದಲ್ಲಿ ತಮ್ಮ ವೈದ್ಯಕೀಯ ಸೇವೆಯಿಂದ ನಿವೃತ್ತರಾದ ನಂತರ ಕೆಮರ ಬಗಲಿಗೆ ಹಾಕಿಕೊಂಡು, ತಮ್ಮ ಪ್ರಿಯ ವಲಯಗಳಲ್ಲಿ ಅಲೆದಾಡುವುದು ಇವರ ಪ್ರಧಾನ ಕಾಯಕ. ಮುಂದಿನ ಬಿದಡುವಿನ ದಿನಗಳನ್ನು ತಿರುಪತಿಯ ಶ್ರೀ ಸತ್ಯಸಾಯಿ ಆಸ್ಪತ್ರೆಯ ರೋಗಿಗಳ ಶುಶ್ರೂಷೆಯಲ್ಲಿ ಕಳೆಯುವ ಇರಾದೆಯಲ್ಲಿ ಅವರಿದ್ದಾರೆ.

