ಕಾಸರಗೋಡು: ಗಗನ ವಿಸ್ಮಯ ಕಂಕಣ ಸೂರ್ಯಗ್ರಹಣ ಗಡಿನಾಡು ಕಾಸರಗೋಡು ಸಹಿತ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಪೂರ್ಣವಾಗಿ ಗೋಚರಿಸಿದೆ. ಬೆಳಗ್ಗೆ 8.04ಕ್ಕೆ ಆರಂಭಗೊಂಡ ಸೂರ್ಯಗ್ರಹಣ 9.45ರ ವೇಳೆಗೆ ಪೂರ್ಣತೆ ಪಡೆಯಲು ಆರಂಭಿಸಿ 9.25ರ ವೇಳೆಗೆ ಗರಿಷ್ಠ ಮಟ್ಟದಲ್ಲಿ ಪ್ರಕಟಗೊಂಡಿತ್ತು. ಬಂಗಾರದ ಬಣ್ಣದ ಪ್ರಭೆಯೊಂದಿಗೆ ಗ್ರಹಣ ಗಗನದ ಪೂರ್ವ ದಿಕ್ಕಿನಲ್ಲಿ ಗೋಚರವಾಗಿದೆ. 9.27ರ ಹೊತ್ತಿಗೆ ಕ್ಷಯಿಸತೊಡಗಿದ ಗ್ರಹಣ 11.04ರ ವೇಳೆಗೆ ಸಮಾಪ್ತಿಗೊಂಡಿತ್ತು.
ಆದರೆ ಒಂದೊಂದು ಪ್ರದೇಶದ ಭೌಗೋಳಿಕ ಹಿನ್ನೆಲಯಿಂದ ಗ್ರಹಣ ಆರಂಭ ಮತ್ತು ಕೊನೆಗೊಳ್ಳುವಲ್ಲಿ ಸೆಕೆಂಡ್ ಗಳ ವ್ಯತ್ಯಾಸ ದಾಖಲಾಗಿವೆ. ಜಿಲ್ಲೆಯ ನೀಲೇಶ್ವರ ತೈಕಡಪ್ಪುರಂ ಕಡಲತೀರ, ಚೆರುವತ್ತೂರು, ಮಾತ್ತಿಲ್, ಎರಮಂ, ಮತಮಂಗಲಂ, ಪನ್ನಿಯೂರು, ಮಾಮನಿಕುನ್ನು, ಇರಿಕ್ಕೂರು, ಪೇರಾವೂರು, ಕೋಳಕ್ಕಾಡ್, ಎಲಪೀಡಿಕ, ಪೆರಿಯ, ವಾಲತ್, ವಯನಾಡ್, ಮೀನಂಗಾಡಿ, ಅಂಬಲವಯಲ್ ಪ್ರದೇಶಗಳಲ್ಲಿ ಕಂಕಣ ಸೂರ್ಯಗ್ರಹಣ ಪೂರ್ಣಸ್ವರೂಪದಲ್ಲಿ ವೀಕ್ಷಿಸಲು ಸಾಧ್ಯವಾಗಿದೆ.
ಗ್ರಹಣ ವೀಕ್ಷಣೆಗೆ ಹರಿದು ಬಂದ ಜನಪ್ರವಾಹ:
ಇಡೀ ಜಗತ್ತಿಗೆ ವಿಸ್ಮಯ ಮೂಡಿಸಿದ ಕಂಕಣ ಸೂರ್ಯಗ್ರಹಣ ಪೂರ್ಣಪ್ರಮಾಣದಲ್ಲಿ ಗೋಚರಿಸಿದ ಜಿಲ್ಲೆ ಚೆರುವತ್ತೂರಿಗೆ ಸಾವಿರಾರು ಮಂದಿ ವೀಕ್ಷಕರು ಹರಿದುಬಂದಿದ್ದರು. ಇಲ್ಲಿನ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮೈದಾನದಲ್ಲಿ ಸೂರ್ಯಗ್ರಹಣ ವೀಕ್ಷಣೆಗಾಗಿ ಜನಪ್ರವಾಹ ಕಂಡುಬಂದಿತ್ತು. ಕಾಸರಗೋಡು ಜಿಲ್ಲಾಡಳಿತೆ ಮತ್ತು ಚೆರುವತ್ತೂರು ಗ್ರಾಮ ಪಂಚಾಯತ್ ಜಂಟಿ ವತಿಯಿಂದ ವ್ಯವಸ್ಥಿತ ಸಿದ್ದತೆ ನಡೆಸಲಾಗಿತ್ತು. ಬೆಳಗ್ಗೆ 8.04ಕ್ಕೆ ಆರಂಭಗೊಂಡ ಗ್ರಹಣ, ಶಾಲಾ ಆವರಣ ಪ್ರದೇಶದಲ್ಲಿ 9.24 ಕಳೆದು 18 ಸೆಕೆಂಡ್ ಕಳೆದ ವೇಳೆ ಪೂರ್ಣವಲಯವಾಗಿ ಗೋಚರಿಸಿದೆ. 9.25ರ ವೇಳೆ ಗರಿಷ್ಠ ಸ್ವರೂಪ ತಳೆದಿತ್ತು. 9.27ರ ವೇಳೆಗೆ ಕ್ಷೀಣವಾಗತೊಡಗಿದ ಗ್ರಹಣ 11.11 ಆಗುವಾಗ ಕೊನೆಕಂಡಿತ್ತು.
ಗ್ರಹಣ ಆರಂಭಗೊಂಡ ವೇಳೆ ಈ ಪ್ರದೇಶದ ತಾಪಮಾನ 27.2 ಡಿಗ್ರಿ ಶೆಲ್ಸಿಯಸ್ ಆಗಿತ್ತು. 9.24ರ ವೇಳೆಗೆ ಇದು 27.1 ಆಗಿ ಕುಸಿಯಿತು. ಚಳಿ ಶೇ 82 ಇದ್ದರೆ, ನಂತರ ಅದು ಶೇ 80 ಆಗಿ ಕಡಿಮೆಯಾಗಿತ್ತು. ಗ್ರಹಣ ಆರಂಭಗೊಂಡ ವೇಳೆ ಪ್ರಕಾಶದ ತೀವ್ರತೆ 753 ಲೆಕ್ಸ್ ಆಗಿದ್ದರೆ, ನಂತರ (9.25ರ ವೇಳೆಗೆ) ಅದು 081 ಆಗಿ ಕಡಿಮೆಯಾಗಿತ್ತು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ನೇತೃತ್ವ ವಹಿಸಿದ್ದರು. ಅವರನ್ನು ಶಾಲೆಯ ಎನ್.ಸಿ.ಸಿ. ಕೆಡೆಟ್ ಗಳು ಸೂರ್ಯಗ್ರಹಣ ವೀಕ್ಷಣೆ(ಸೋಲಾರ್ ಫಿಲ್ಟರ್)ಕನ್ನಡಕ ಹಸ್ತಾಂತರಿಸಿ ಸ್ವಾಗತಿಸಿದರು. ಗಾರ್ಡ್ ಆಫ್ ಆನರ್ ಜರುಗಿತು. ಸಾರ್ವಜನಿಕ ವೀಕ್ಷಣೆಗೆ ದೊಡ್ಡ ಬಿಳಿತೆರೆ ಇರಿಸಲಾಗಿತ್ತು.
ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು, ವಿಜ್ಞಾನಿಗಳು, ಸಂಶೋಧಕರು ಸಹಿತ ಅನೇಕ ಮಂದಿ ವೀಕ್ಷಣೆಯಲ್ಲಿ ಪಾಲ್ಗೊಂಡರು.
ಮೂಢನಂಬಿಕೆ ವಿರುದ್ಧ ರಂಗಕ್ಕಿಳಿಯುವ ಮೂಲಕ ಉತ್ತರ ನೀಡಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು!!
ಕಂಕಣ ಸೂರ್ಯಗ್ರಹಣಕ್ಕೆ ಸಂಬಂಧಿಸಿ ಇಂದಿಗೂ ಕೆಲವೆಡೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳಿಗೆ ವಿರುದ್ಧವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ತಾವೇ ರಂಗಕ್ಕಿಳಿಯುವ ಮೂಲಕ ಉತ್ತರ ನೀಡಿದ್ದಾರೆ.
ಜಿಲ್ಲೆಯ ಚೆರುವತ್ತೂರಿನ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಸಾಲೆ ಮೈದಾನದಲ್ಲಿ ಜಿಲ್ಲಾಡಳಿತೆ ಮತ್ತು ಚೆರುವತ್ತೂರು ಗ್ರಾಮಪಂಚಾಯತ್ ನಡೆಸಿದ ಸಾರ್ವಜನಿಕ ಸೂರ್ಯಗ್ರಹಣ ವೀಕ್ಷಣೆಗೆ ನೇತೃತ್ವ ನೀಡಲು ಆಗಮಿಸಿದ್ದ ಜಿಲ್ಲಾಧಿಕಾರಿ ಅವರು ವಿಶಿಷ್ಟ ರೂಪದಲ್ಲಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಸಂಘಟಕ ಸಮಿತಿ ಪದಾಧಿಕಾರಿಗಳು ವೀಕ್ಷಕರಿಗಾಗಿ ಉಪ್ಪಿಟ್ಟು ಮತ್ತು ಬಿಸ್ಕತ್ತು ಸಿದ್ಧಪಡಿಸಿದ್ದರು. ಗ್ರಹಣ ವೇಳೆ ಏನನ್ನೂ ಸೇವಿಸಕೂಡದು ಇತ್ಯಾದಿ ಮೂಡನಂಬುಗೆಗಳಿಗೆ ವಿರುದ್ಧ
ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾವೇ ಮೊದಲಿಗೆ ಉಪಹಾರ ಸೇವಿಸುವ ಮೂಲಕ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಇದರಿಂದ ಧೈರ್ಯತುಂಬಿಕೊಂಡ ಜನ ಉಪಹಾರ ಸೇವಿಸಿದ್ದರು.



