ಕಾಸರಗೋಡು: ಸೂರ್ಯಗ್ರಹಣ ವೀಕ್ಷಣೆಗೆ ಕೇರಳದ ಉತ್ತರದ ಜಿಲ್ಲೆಗಳಲ್ಲಿ ಸಜ್ಜೀಕರಣ ಪೂರ್ಣಗೊಂಡಿದ್ದು, 2019ನೇ ಸಾಲಿನ ಕೊನೆಯ ಸೂರ್ಯಗ್ರಹಣ ವೀಕ್ಷಣೆಗೆ ಜನತೆ ಕೌತುಕದಿಂದ ಕಾಯುತ್ತಿದ್ದಾರೆ. ಈ ಬಾರಿ ಸೂರ್ಯಗ್ರಹಣ ಎನ್ನುವ ಗಗನ ವಿಸ್ಮಯವನ್ನು ವೀಕ್ಷಿಸುವ ಅಪೂರ್ವ ಅವಕಾಶವನ್ನು ಕಾಸರಗೋಡು ಜಿಲ್ಲೆಯ ಜನತೆ ಪಡೆಯಲಿದ್ದು, ಇದಕ್ಕಾಗಿ ಚೆರ್ವತ್ತೂರಿನಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ.
ಅತ್ಯಂತ ಸ್ಪಷ್ಟವಾಗಿ ಈ ಗ್ರಹಣವನ್ನು ವೀಕ್ಷಿಸಬಹುದಾದ ಜಗತ್ತಿನ ಮೂರು ಸೂಕ್ತ ಜಾಗಗಳಲ್ಲಿ ಕಾಸರಗೋಡು ಜಿಲ್ಲೆಯ ಚೆರುವತ್ತೂರು ಒಂದಾಗಿದ್ದು, ಇಲ್ಲಿನ ಕಾಡಂಗೋಡಿನ ಸಾರ್ವಜನಿಕ ಪ್ರದೇಶದಲ್ಲಿ ವೀಕ್ಷಣೆಗಿರುವ ಸರ್ವ ಸಿದ್ಧತೆ ನಡೆಸಲಾಗುತ್ತಿದೆ. ಬೆಳಗ್ಗೆ 8.04 ಕ್ಕೆ ಆರಂಭಗೊಳ್ಳುವ ಗ್ರಹಣ, 9.04ರ ವೇಳೆಗೆ ಪೂರ್ಣ ರೂಪ ತಲಪಲಿದೆ. ಮಂಗಳೂರಿನಿಂದ ಬೇಪೂರು ವರೆಗಿನ ವಲಯಗಳಲ್ಲಿ ಭಾಗಿಕವಾಗಿ ಗೋಚರಿಸಲಿದೆ. ಕಣ್ಣೂರು, ವಯನಾಡ್ ಜಿಲ್ಲೆಗಳ ಮಾತಮಂಗಲಂ, ಪನ್ನಿಯೂರು, ಪೇರಾವೂರು, ಮೀನಾಂಗಾಡಿ, ಚುಳ್ಳಿಯೋಡ್ ಪ್ರದೇಶಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ.
ಭಾರತದಲ್ಲಿ ಪ್ರಥಮ ಬಾರಿಗೆ ಸೂರ್ಯಗ್ರಹಣ ಕಾಣಿಸಲಿರುವುದು ಜಿಲ್ಲೆಯ ಚೆರುವತ್ತೂರಿನಲ್ಲಿ ಎಂಬುದು ಮತ್ತೊಂದು ವಿಶೇಷತೆಯಾಗಿದೆ. ಈ ಪ್ರದೇಶದ ಭೌಗೋಲಿಕ ವಿಶೇಷತೆಯಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರವಾಗಲು ಕಾರಣ ಎಂಬುದು ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಹಣವೀಕ್ಷಣೆಗೆ ವ್ಯವಸ್ಥೆ ಏರ್ಪಡಿಸುವ ಸ್ಪೇಸ್ ಇಂಡಿಯಾ ಸಂಸ್ಥೆಯ ಸಿ.ಎಂ.ಡಿ.ಸಚಿನ್ ಬಂಬೆ ತಿಳಿಸಿದ್ದಾರೆ.
ಪುಟ್ಟ ಅವಧಿಯಲ್ಲಿ ಕಾಣಿಸುವ ಬೃಹತ್ ಸೂರ್ಯಗ್ರಹಣವನ್ನು ನೇರವಾಗಿ ನಮ್ಮ ಕಣ್ಣುಗಳಿಂದ ವೀಕ್ಷಿಸದಿರುವಂತೆ .ಸಚಿನ್ ಬಂಬೆ ಎಚ್ಚರಿಕೆ ನೀಡಿದ್ದಾರೆ. ಪೂರ್ಣಗ್ರಹಣ ವೇಳೆ ವ್ಯಾಪಿಸುವ ಕತ್ತಲ ಸಂದರ್ಭ ಸಾರ್ವಜನಿಕರು ತಮ್ಮ ತಮ್ಮ ತಾಣಗಳಿಂದ ಹೊರಗಿಳಿಯಬಾರದು. ಪೂರ್ಣಗ್ರಹಣ ಕೊನೆಗೊಂಡ ವೇಳೆ ಸೂರ್ಯ ಕಿರಣಗಳು ದೊಡ್ಡ ಪ್ರಮಾಣದಲ್ಲಿ ನೇರವಾಗಿ ಕಣ್ಣಿಗೆ ತಾಕುವ ಭೀತಿಯಿದೆ. ಬೆಳಕು ಕಡಿಮೆಯಿರುವ ಸಂದರ್ಭ ಕಂಗಳ ಒಳಭಾಗ ವಿಕಸಿತಗೊಂಡಿರುವ ವೇಳೆ ದೊಡ್ಡ ಪ್ರಮಾಣದಲ್ಲಿ ಸೂರ್ಯಕಿರಣಗಳು ಕಣ್ಣುಗಳಿಗೆ ಬಿದ್ದರೆ ದೃಷ್ಟಿದೋಷ ಬಾಧಿಸುವ ಭೀತಿಯಿದೆ ಎಂದು ಅವರು ತಿಳಿಸಿದ್ದಾರೆ.


