ಕಾಸರಗೋಡು: ಗ್ರಹಣದಂಥಾ ಗಂಭೀರ ಸ್ವಭಾವದ ಗಗನ ವಿಸ್ಮಯವನ್ನು ಹಾಡುವ-ಕುಣಿಯುವ ಮೂಲಕ ವಿನೋದವಾಗಿಸಿಕೊಂಡು ಈಕ್ಷಿಸಿದ ಕನ್ನಡಿಗರ ತಂಡ ಸ್ಥಳೀಯರ ಕುತೂಹಲಕ್ಕೆ ಕಾರಣರಾದರು. ಕರ್ನಾಟಕದ ಶಿವಮೊಗ್ಗದಿಂದ ಆಗಮಿಸಿದ ಜ್ಞಾನ-ವಿಜ್ಞಾನ ಪರಿಷತ್ ಸಂಸ್ಥೆಯ 30 ಮಂದಿಯ ತಂಡ ಈ ರೀತಿ ಉಳಿದವರ ಗಮನೆ ಸೆಳೆದಿದ್ದಾರೆ. ಪ್ರಾಚಾರ್ಯರುಗಳು, ವಿದ್ಯಾರ್ಥಿಗಳೂ, ಗೃಹಿಣಿಯರೂ ಈ ತಂಡದಲ್ಲಿದ್ದರು. ಡಾ.ವಿಜಯ್ ವಾಮನ್ ಈ ಬಳಗದ ನಾಯಕರಾಗಿದ್ದರು. ಸೂರ್ಯಗ್ರಹಣಕ್ಕೆ ಕೇರಳದ ಮೂಲಕ ಅತ್ಯಪೂರ್ವ ಅನುಭವ ಲಭಿಸಿದೆ. ವಿಜ್ಞಾನದ ಅರಿವಿನೊಂದಿಗೆ ಮೂಢ ನಂಬಿಕೆಗಳನ್ನು ಸಮಾಜದಿಂದ ತೊಲಗಿಸಬೇಕು ಎಂದವರು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಇವರು ಸೂರ್ಯಗ್ರಹಣ ಈಕ್ಷಣೆಗೆ ಬಂದ ಸಾರ್ವಜನಿಕರಿಗಾಗಿ ಸುಮಾರು 500 ಈಕ್ಷಣೆ ಕನ್ನಡಕಗಳನ್ನು ಉಚಿತವಾಗಿ ವಿತರಣೆ ನಡೆಸಿದರು.
ಸಾರ್ವಜನಿಕ ಈಕ್ಷಣೆಗೆ ಸೂಕ್ತ ವ್ಯವಸ್ಥೆ ನಡೆಸಿದ ಸಂಘಟಕರಿಗೆ, ಸ್ವಯಂ ಸೇವಕರಿಗೆ ಮತ್ತು ಕೇರಳ ರಾಜ್ಯಕ್ಕೆ ಜೈಕಾರ ಹಾಕಿ ತೆರಳಿದ ಕನ್ನಡಿಗರ ಶೈಲಿಯೂ ಇಲ್ಲಿನ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡು ಸಾವಿರ ಕನ್ನಡಕಗಳ ವಿತರಣೆ:
ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ನೀಲೇಶ್ವರ ತೈಕಡಪ್ಪುರಂ ಬೀಚ್ ನಲ್ಲಿ ಸಾರ್ವಜನಿಕರಿಗಾಗಿ ವಿತರಣೆ ನಡೆಸಿದ್ದ 2 ಸಾವಿರಕ್ಕೂ ಅಧಿಕ ಕನ್ನಡಕಗಳು. ಕೋಯಿಕೋಡ್ ವಲಯ ವಿಜ್ಞಾನ ಕೇಂದ್ರ ಮತ್ತು ಪ್ಲಾನಿಟೇರಿಯಂ, ಶಿವಮೊಗ್ಗದ ಜ್ಞಾನ-ವಿಜ್ಞಾನ ಪರಿಷತ್, ಕಾಸರಗೋಡು ಎಲ್.ಬಿ.ಎಸ್.ಇಂಜಿನಿಯರಿಂಗ್ ಕಾಲೇಜು ಸಮಸ್ಥೆಗಳು ಈ ಕನ್ನಡಕಗಳನ್ನು ಇಲ್ಲಿ ಉಚಿತವಾಗಿ ನೀಡಿದವು. ಜೊತೆಗೆ 2 ಬ್ಲೋಕ್ ಬಾಕ್ಸ್ (ಪಿನ್ ಹಾಲ್ ಕೆಮೆರ), 2 ಸಿಂಪಲ್ ಟೆಲೆಸ್ಕೋಪ್, ಒಂದು ಮೀಟರ್ ರಿಫ್ಲೆಕ್ಷನ್ ಸೌಲಭ್ಯ ಇತ್ಯಾದಿಗಳೂ ಪ್ಲಾನಿಟೇರಿಯಂನ ಅಂಗವಾಗಿ ಗ್ರಹಣ ವೀಕ್ಷಣೆಗೆ ಇಲ್ಲಿ ಸ್ಥಾಪಿಸಲಾಗಿತ್ತು.
ಸುರಕ್ಷಾ ಸೌಲಭ್ಯಗಳೂ ಸಿದ್ಧ:
ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಸಿದ್ಧತೆ ನಡೆಸಿದ್ದ ನೀಲೇಶ್ವರ ತೈಕಡಪ್ಪುರಂ ಬೀಚ್ ನಲ್ಲಿ ಸಾರ್ವಜನಿಕ ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ನೀಲೇಶ್ವರ ತಾಲೂಕು ಆಸ್ಪತ್ರೆಯ ಸೇವೆ, ಕಾನೂನು ಸಂರಕ್ಷಣೆಯ ಉದ್ದೇಶದಿಂದ ನೀಲೇಶ್ವರ ಠಾಣೆ, ಕರಾವಳಿ ಠಾಣೆ, ಅಗ್ನಿಸಾಮಕದಳ ಇತ್ಯಾದಿಗಳೂ ಸಿದ್ಧವಾಗಿದ್ದವು. ವೀಕ್ಷಣೆಗೆ ಆಗಮಿಸಿದ್ದ ಮಗುವೊಂದಕ್ಕೆ ಅಸ್ವಸ್ಥತೆ ತಲೆದೋರಿದ ಹಿನ್ನೆಲೆಯಲ್ಲಿ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಕುಟುಂಬಶ್ರೀ ವತಿಯಿಂದ ಉಪಹಾರ:
ನೀಲೇಶ್ವರ ತೈಕಡಪ್ಪುರಂನಲ್ಲಿ ಸೂರ್ಯಗ್ರಹಣ ಈಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಕುಟುಂಬಶ್ರೀ ವತಿಯಿಂದ ಉಪಹಾರ ವಿತರಣೆ ನಡೆಯಿತು. ಗ್ರಹಣ ವೇಳೆ ಆಹಾರ ಸೇವನೆ ಸಲ್ಲದು ಎಂಬುದು ಮೂಢನಂಬಿಕೆ ಎಂದು ಸಾರಿ ಈ ಉಪಹಾರ ವಿತರಣೆ ನಡೆಸಲಾಯಿತು.

