ನವದೆಹಲಿ: ಜನರನ್ನು ತಪ್ಪು ಹಾದಿಗೆಳೆದು ಬೆಂಕಿ ಹಚ್ಚುವಂತೆ ಮಾಡಿಸುವುದು, ಹಿಂಸಾಚಾರ ಸೃಷ್ಟಿಸುವುದು ನಾಯಕತ್ವವಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಗುರುವಾರ ಹೇಳಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ರಾವತ್ ಅವರು, ಜನರು ಬೆಂಕಿ ಹಚ್ಚುವಂತೆ ಮಾಡುವುದು, ಹಿಂಸಾಚಾರದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ನಾಯಕತ್ವವಲ್ಲ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯಗಳು, ಕಾಲೇಜುಗಳು ವಿದ್ಯಾರ್ಥಿಗಳು ಸಂಘಟನೆಗೊಂಡು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬೆಂಕಿ ಹಚ್ಚುತ್ತಿದ್ದಾರೆ, ನಗರಗಳಲ್ಲಿ ಹಿಂಸಾಚಾರ ಸೃಷ್ಟಿಸುತ್ತಿದ್ದಾರೆ. ಇದು ನಾಯಕತ್ವವಲ್ಲ. ಉತ್ತಮ ರೀತಿಯಲ್ಲಿ ಮುನ್ನಡೆಯುವುದು ನಾಯಕತ್ವ. ಹೀಗಾಗಯೇ ನಾಯಕತ್ವ ಎಂಬುದು ಅತ್ಯಂತ ಕಠಿಣವಾಗಿರುತ್ತದೆ. ನೀವು ಮುಂದಡಿ ಇಡುವಾಗ, ನಿಮ್ಮನ್ನು ನೋಡಿ ಸಾಕಷ್ಟು ಜನರು ಹೆಜ್ಜೆ ಇಡುತ್ತಾರೆ. ಇದು ಅಷ್ಟು ಸುಲಭದ ಕೆಲಸವಲ್ಲ. ನೋಡುವುದಕ್ಕೆ ಕೇಳುವುದಕ್ಕೆ ಅತ್ಯಂತ ಸುಲಭವೆನಿಸುತ್ತದೆ. ಜನರನ್ನು ಉತ್ತಮ ಹಾದಿಗೆ ಕರೆದೊಯ್ಯುವವರೇ ನಾಯಕ ಎಂದು ತಿಳಿಸಿದ್ದಾರೆ.


