ಬದಿಯಡ್ಕ: ಭೂಕೈಲಾಸಂ, ಶ್ರೀರಾಮದರ್ಶನಂ, ಶ್ರೀಕೃಷ್ಣ ಕಂಸವಧೆ, ಶಬರಿಮಲೆ ಸ್ವಾಮಿ ಅಯ್ಯಪ್ಪ ಮೊದಲಾದ ನೃತ್ಯರೂಪಕಗಳನ್ನು ಪ್ರಸ್ತುತ ಪಡಿಸಿ ಜನಮನಸೂರೆಗೊಂಡ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬದಿಯಡ್ಕ ಶಾಖೆಯ 15ನೇ ವರ್ಷದ `ನೃತ್ಯೋತ್ಸವ 2020' ಕಾರ್ಯಕ್ರಮವು ಜ.25ರಂದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ನಡೆಯಲಿದ್ದು, `ಭಕ್ತ ಪ್ರಹ್ಲಾದ' ಎಂಬ ನೃತ್ಯ ರೂಪಕ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿರುವುದು.
ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು, ರಾಷ್ಟ್ರ ಪ್ರಶಸ್ತಿ ವಿಜೇತ ವಿದ್ವಾನ್ ವೆಳ್ಳಿಕೋತ್ ವಿಷ್ಣುಭಟ್, ವಿದ್ವಾನ್ ವಸಂತ ಕುಮಾರ್ ಗೋಸಾಡ, ಟಿ.ವಿ.ಗಿರಿ ಮುಡಿಪ್ಪು, ಡಾ. ರಾಜೇಶ್ ಬೆಜ್ಜಂಗಳ, ವಿದ್ವಾನ್ ಗೀತೇಶ್ ಕುಮಾರ್ ನೀಲೇಶ್ವರ, ವಿದ್ವಾನ್ ರಾಜಗೋಪಾಲ್ ಕಾಞಂಗಾಡು, ಬಾಬಣ್ಣ ಪುತ್ತೂರು, ಸಚಿನ್ ಪುತ್ತೂರು ಹಿಮ್ಮೇಳ ತಂಡದೊಂದಿಗೆ ವಿಘ್ನೇಶ್ ವಿಶ್ವಕರ್ಮ, ಭಾವನಾ ಕಲಾ ಆಟ್ರ್ಸ್ ಪುತ್ತೂರು, ಕೃಷ್ಣಪ್ಪ ಮಾಸ್ತರ್ ಅಡೂರು ಮುಖವರ್ಣಿಕೆ ಹಾಗೂ ವಸ್ತ್ರ ವಿನ್ಯಾಸದಲ್ಲಿ ಸಹಕರಿಸುವರು.
ಸಂಜೆ 6 ಗಂಟೆಗೆ ದೀಪಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆ, ಶಾಸ್ತ್ರೀಯ ಹಾಗೂ ಜಾನಪದ ನೃತ್ಯ, ರಾತ್ರಿ 7.45ರಿಂದ ನಡೆಯುವ ಸಭಾಕಾರ್ಯಕ್ರಮದಲ್ಲಿ ವೈಷ್ಣವಿ ನಾಟ್ಯಾಲಯದ ಬದಿಯಡ್ಕ ಶಾಖೆಯ ಅಧ್ಯಕ್ಷ ಮಹೇಶ್ ವಳಕುಂಜ ಅಧ್ಯಕ್ಷತೆ ವಹಿಸುವರು. ಪುತ್ತೂರು ಪದಡ್ಕ ವಿಶ್ವಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ ಏಂಡ್ ಕಲ್ಚರ್‍ನ ನೃತ್ಯ ಗುರುಗಳಾದ ವಿದುಷಿ ನಯನ ವಿ.ರೈ ದೀಪಪ್ರಜ್ವಲನೆಯೊಂದಿಗೆ ಸಭಾಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣುಭಟ್ ಮಾತನಾಡುವರು. ಜಯದೇವ ಖಂಡಿಗೆ, ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ. ರಾಜೇಶ್ ಬೆಜ್ಜಂಗಳ ಉಪಸ್ಥಿತರಿರುವರು. ರಾತ್ರಿ 8.45ರಿಂದ ನೃತ್ಯ ರೂಪಕ ಭಕ್ತ ಪ್ರಹ್ಲಾದ ಅನಾವರಣಗೊಳ್ಳಲಿದೆ. ರಾತ್ರಿ ಭೋಜನದೊಂದಿಗೆ 11 ಗಂಟೆಗೆ ಕಾರ್ಯಕ್ರಮ ಸಂಪನ್ನವಾಗಲಿದೆ ಎಂದು ಸಂಬಂಧಪಟ್ಟರು ತಿಳಿಸಿರುತ್ತಾರೆ.


