ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಶುಭಾಶಯ, ಅಭಿನಂದನೆ, ಮತ್ತು ಧನ್ಯವಾದ
ಕೆಲವರು ಈ ಪದಗಳನ್ನು ಬಳಸುವುದು ‘ಸಂದರ್ಭಕ್ಕೆ ಸರಿಯಾಗಿ’ ಇರುವುದಿಲ್ಲ. ಅಭಿನಂದನೆ ತಿಳಿಸುವ ಸಂದರ್ಭಗಳಲ್ಲಿ ಶುಭಾಶಯ ಎನ್ನುತ್ತಾರೆ, ಅಥವಾ ಅದಲುಬದಲಾಗಿ ಬಳಸುತ್ತಾರೆ. ಇದು ತಪ್ಪೆನ್ನಲಾಗದಾದರೂ ಔಚಿತ್ಯಪೂರ್ಣ ಎನಿಸುವುದಿಲ್ಲ. ಒಬ್ಬ ವ್ಯಕ್ತಿ ಒಂದು ಕಾರ್ಯಸಾಧನೆಗೆ ತೊಡಗಿದರೆ ಆಗ ನಾವು ಶುಭ ಹಾರೈಸುತ್ತೇವೆ, ಅದೇ ಶುಭಾಶಯ. [ಶುಭ+ಆಶಯ= ಶುಭಾಶಯ. ಪಟ್ಟೆ ಷ ಬಳಸಿ ಶುಭಾಷಯ ಎಂದು ಬರೆದರೆ ತಪ್ಪು.] ಕಾರ್ಯಸಾಧನೆ ಕೈಗೂಡಿದಾಗ ಅಭಿನಂದನೆ ಸಲ್ಲಿಸುತ್ತೇವೆ. ಶುಭಾಶಯ ಬಹು ಮಟ್ಟಿಗೆ ಭವಿಷ್ಯಮುಖಿ ಮಾತು/ಹಾರೈಕೆ. ಅಭಿನಂದನೆ ಹೆಚ್ಚಾಗಿ ಭೂತಕಾಲದ್ದಕ್ಕೆ, ಅಂದರೆ ಆಗಲೇ ನಡೆದುಹೋಗಿರುವುದಕ್ಕೆ ನಮ್ಮ ಕಡೆಯಿಂದ ಪ್ರಶಂಸೆ, ಮೆಚ್ಚುಗೆ. ಇನ್ನೊಬ್ಬರ ಸಾಧನೆಯಿಂದ ನಮಗಾದ ಆನಂದವನ್ನು ವ್ಯಕ್ತಪಡಿಸಲಿಕ್ಕೆ ಹೇಳುವ ಮಾತು. ‘ಅಭಿನಂದನೆ, ಅಭಿವಂದನೆ’ ಎಂದು ಮಾತಿನ/ಬರಹದ ಚಂದ ಹೆಚ್ಚಿಸಲು ‘ಅಭಿವಂದನೆ’ಯನ್ನೂ ಸೇರಿಸುವುದಿದೆ. ಅಭಿವಂದನೆ ಎಂದರೆ ನಿಯಮಾನುಸರಣಪೂರ್ವಕ ನಮಸ್ಕಾರ, ಗೌರವದಿಂದ ಮಾಡುವ ನಮಸ್ಕಾರ. ಅಭಿನಂದನೆ ಪಡೆಯುವವರು ಅದಕ್ಕೆ ಅರ್ಹರೇ ಆಗಿರುತ್ತಾರೆ.
ಧನ್ಯವಾದ ಅಂದರೆ ಕೃತಜ್ಞತೆಯನ್ನು ಹೇಳುವುದು, ವಂದನಾರ್ಪಣೆ. ಇದು ಶುಭಾಶಯ ಅಥವಾ ಅಭಿನಂದನೆ ಮಾತುಗಳಂತಲ್ಲದೆ, ಕಾರ್ಯಸಾಧನೆ ಮಾಡಿದ ಅಥವಾ ಪ್ರಶಂಸೆ ಪಡೆದುಕೊಂಡ ವ್ಯಕ್ತಿಯು ಧನ್ಯತಾಭಾವದಿಂದ ಬೇರೆಯವರ ಉಪಕಾರವನ್ನು, ಹಾರೈಕೆಗಳನ್ನು ಸ್ಮರಿಸಿಕೊಳ್ಳುವುದು.
ಶುಭಾಶಯ, ಅಭಿನಂದನೆ, ಧನ್ಯವಾದ, ಕೃತಜ್ಞತೆ- ಇವೆಲ್ಲವನ್ನೂ ‘ಗಳು’ ಎಂಬ ಬಹುವಚನ ರೂಪವಿಲ್ಲದೆಯೂ ಬಳಸಬಹುದು; ನಿಜವಾಗಿ ಅದೇ ಒಳ್ಳೆಯದು. ಆದರೂ “ಮನಃತೃಪ್ತಿಯಾಗುವಷ್ಟು ಮತ್ತೆ ಮತ್ತೆ ಹೇಳುತ್ತಿದ್ದೇನೆ" ಎಂಬ ಭಾವಾರ್ಥದಿಂದ ‘ಗಳು’ ಸೇರಿಸಿದರೂ ತಪ್ಪೇನಲ್ಲ. ಅನಾವಶ್ಯಕ ಅಷ್ಟೇ. ಬಹುಶಃ ಇಂಗ್ಲಿಷ್‌ನಲ್ಲಿ Greetings, Congratulations, Thanks ಇತ್ಯಾದಿ plural forms ಹೆಚ್ಚು ಬಳಕೆಯಲ್ಲಿರುವುದನ್ನು ನೋಡಿ ಧನ್ಯವಾದ‘ಗಳು’, ಅಭಿನಂದನೆ‘ಗಳು’, ಶುಭಾಶಯ‘ಗಳು’ ಬಳಕೆಗೆ ಬಂದಿರಬಹುದು.
===
೨. ದ್ರಾಬೆ ಎಂಬ ಬೈಗಳ ವೇದಕಾಲದ್ದು!
‘ಅವನೊಬ್ಬ ದ್ರಾಬೆ’ ಎಂದು ಬೈಯುವುದು, ತಿರಸ್ಕಾರಭಾವದಿಂದ ಮಾತಾಡುವುದು ಪ್ರಾದೇಶಿಕವಾಗಿ ರೂಢಿಯಲ್ಲಿದೆ. ಎಲ್ಲ ಬೈಗಳ ಮಾತುಗಳಂತೆ ಇದೂ ಅಸ್ಪಷ್ಟ ಅರ್ಧದ್ದು. ಗೋಪಾಲಕೃಷ್ಣ ಅಡಿಗರು ಇದನ್ನು ತಮ್ಮ ಕಾವ್ಯದಲ್ಲಿ ಉಪಯೋಗಿಸಿ ಶಾಶ್ವತಗೊಳಿಸಿದ್ದಾರೆ. ("ಹಳೆಮನೆಯ ಮುರುಕು ಜಂತಿಯ ಮೇಲೆ ಮುದಿಗೂಬೆ| ಹಗಲಿರುಳು ಗೊರಕೆ ಗೊಣಗಾಟ ಕಣೊ ಪಾಪಿ-ದ್ರಾಬೆ!") ಒಟ್ಟಾರೆ ಇದಕ್ಕೆ ದರಿದ್ರ, ನಾಚಿಕೆಗೆಟ್ಟ, ತಿಂಡಿಪೋತ ಇತ್ಯಾದಿ ಅರ್ಥಗಳನ್ನು ಊಹಿಸಬಹುದು. ಸಾಹಿತ್ಯ ಪರಿಷತ್ ಕೋಶದಲ್ಲಿ ಈ ಶಬ್ದ ತಮಿಳು ತೆಲುಗುಗಳಲ್ಲಿಯೂ ತುಸು ಉಚ್ಚಾರಭೇದದೊಡನೆ ಇದೆಯೆಂದು ಹೇಳಿ, ಇದು ಸಂಸ್ಕೃತ ‘ದ್ರಾಪ’ದಿಂದ (ಅರ್ಥಗಳು: ಕೆಸರು, ಆಕಾಶ, ಮೂರ್ಖ, ಪರಮೇಶ್ವರ) ಬಂದದ್ದು ಎಂದಿದೆ. ಈ ಪದದ ಬೆನ್ನು ಹತ್ತಿ ಹೋದಾಗ ಇದು ವೇದಕಾಲದಷ್ಟು ಹಿಂದೆ ಹೋಗುತ್ತದಲ್ಲದೆ ಗ್ರೀಕ್‌ನಲ್ಲಿಯೂ ಶಬ್ದಬಂಧುಗಳನ್ನು ಹೊಂದಿರುವುದು ತಿಳಿಯುತ್ತದೆ. ಇದರ ಧಾತ್ವರ್ಥ ‘ದ್ರಾ’ ಧಡಪಡಿಸುವುದು, ತಿರಿಯುವುದು, ಬಡತನದಲ್ಲಿರುವುದು, ಗರಜಿಯಲ್ಲಿರುವುದು ಇತ್ಯಾದಿ. ಜಡೆಗಟ್ಟಿದ ಕೂದಲಿನ ಶಿವನಿಗೆ ದ್ರಾಪಿ ಎಂಬ ಹೆಸರಿದೆ. ಶಿವನು ತಿರುಕನಾಗಿ ಓಡಾಡುವುದರಿಂದ ಈ ಹೆಸರು ಬಂದಿದೆ. ಯಜುರ್ವೇದದ ವಾಜಸನೇಯ ಸಂಹಿತೆಯಲ್ಲಿ ರುದ್ರನನ್ನು ಕುರಿತ “ದ್ರಾಪೇ ಅಂದಸಸೃತೇ ದರಿದ್ರ ನೀಲಲೋಹಿತಃ" ಎಂದು ಆರಂಭವಾಗುವ ಮಂತ್ರವೊಂದಿದೆ. ಅಂದಮೇಲೆ ಈ ಯುಗದ ದರಿದ್ರ ದ್ರಾಬೆಗಳು ಒಳ್ಳೇ ಕಂಪೆನಿಯಲ್ಲಿದ್ದಾರೆ ಎನ್ನಬಹುದು!" - ಎಂದು ಪಾವೆಂ ಆಚಾರ್ಯರ ಅಭಿಪ್ರಾಯ.
===
೩. ಪದ ಬಳಕೆ ಬಗೆಗಿನ ಜಿಜ್ಞಾಸೆಗಳು
ಅ) ಶೋಚನೀಯ ಸರಿ. ಸಂಸ್ಕೃತದಲ್ಲಿ ಈ ಪದಕ್ಕೆ ‘ದುಃಖ ಪಡಬೇಕಾದ’, ‘ದಯೆ ತೋರಲು ಅರ್ಹವಾದ’ ಎಂದು ಅರ್ಥ. ಆದರೆ ಕನ್ನಡದಲ್ಲಿ ‘ಕೆಟ್ಟ ಅವಸ್ಥೆಯಲ್ಲಿರುವ’ ಅಥವಾ ಅಸಹಾಯಕ (ಇಂಗ್ಲಿಷ್‌ನ helplessness, pathetic) ಪರಿಸ್ಥಿತಿಗಳ ಬಣ್ಣನೆಗೆ ಈ ಪದ ಬಳಕೆಯಾಗುವುದು ಹೆಚ್ಚು. ಆದ್ದರಿಂದಲೇ ಯಾರಾದರೂ ನಿಧನರಾದಾಗ (ಅಕಾಲನಿಧನ ಅಂತೇನಲ್ಲ, ತುಂಬು ಜೀವನ ನಡೆಸಿ ಇಹಲೋಕ ತ್ಯಜಿಸಿದಾಗಲೂ) ಕೌಟುಂಬಿಕರು, ಬಂಧುಮಿತ್ರರು ಪತ್ರಿಕೆಗಳಲ್ಲಿ ಸಚಿತ್ರ ಪ್ರಕಟಿಸುವ ಶ್ರದ್ಧಾಂಜಲಿ ಬರಹಕ್ಕೆ ‘ಶೋಚನೀಯ ನಿಧನ’ ಎಂಬ ತಲೆಬರಹ ಸ್ವಲ್ಪ ವಿಚಿತ್ರದ್ದೆನಿಸುತ್ತದೆ [ಮೈಸೂರಿನಿಂದ ಸುರೇಂದ್ರ ರಾಮಯ್ಯ ಅವರ ಗಮನಿಕೆ]. ಮೂಲ ಸಂಸ್ಕೃತದ ಅರ್ಥವನ್ನು ಪರಿಗಣಿಸಿದರೆ ‘ಶೋಚನೀಯ’ ಇಲ್ಲಿ ಸಮಂಜಸ ಪದವೇ. ಆದರೆ ಮೊನ್ನೆ ಪತ್ರಿಕೆಯೊಂದರಲ್ಲಿ ‘ಶೋಚನಿಯ ನಿಧನ’ ಎಂದು ಇತ್ತು, ಹಾಗೆ ದೀರ್ಘವಿಲ್ಲದೆ ಬರೆಯುವುದು ತಪ್ಪು.
ಆ) ಕುಂಠಿತ ಸರಿ. ಸಂಸ್ಕೃತದಲ್ಲಿ ‘ಕುಂಠ’ ಅಥವಾ ‘ಕುಂಠಿತ’ ಅಂದರೆ ಶಕ್ತಿ ಕುಂದಿದ, ಕುಗ್ಗಿದ, ಮೊಟಕಾದ, ಕೆಲಸಕ್ಕೆ ಅಸಮರ್ಥವಾದ, ತಡೆದು ತಡೆದು ಆಗುವ, ಹರಿತವಾಗಿಲ್ಲದಿರುವ ಮುಂತಾದ ಅರ್ಥಗಳಿವೆ. ಕನ್ನಡದ ‘ಕುಂಟ’ ಪದ ’ಕುಂಠ’ದ ತದ್ಭವ. ಕುಂಟಿತ ಎಂದು ಬರೆಯುವುದಕ್ಕಿಂತ ಮೂಲ ಸಂಸ್ಕೃತದ ‘ಕುಂಠ’ಕ್ಕೆ ಇತ ಪ್ರತ್ಯಯ ಸೇರಿಸಿ ‘ಕುಂಠಿತ’ ಎಂದು ಬರೆಯುವುದೇ ಒಳ್ಳೆಯದು. [೧೫ಜನವರಿ೨೦೧೯ರ ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ ‘ರಸ್ತೆ ಅಪಘಾತಗಳಿಂದ ಅಭಿವೃದ್ಧಿ ಕುಂಠಿತ’ ತಲೆಬರಹದಲ್ಲಿ ಕುಂಠಿತ ಪದ ಬಳಕೆ ಸರಿಯೇ? ಎಂದು ಹುಬ್ಬಳ್ಳಿಯಿಂದ ಅನಂತರಾಜ ಮೇಲಾಂಟ ಅವರು ವ್ಯಕ್ತಪಡಿಸಿರುವ ಜಿಜ್ಞಾಸೆಗೆ ಇದು ಉತ್ತರ.]
ಇ) ವಿಲೇವಾರಿ ಎಂಬ ಪದ ಮರಾಠಿ ಮತ್ತು ಹಿಂದೀ ಭಾಷೆಗಳಲ್ಲಿ ಬಳಕೆಯಲ್ಲಿರುವ ‘ವಿಲ್ಹಾ’ ಅಥವಾ ‘ವಿಲ್ಹೇ’ಯಿಂದ ಬಂದದ್ದು. ಈ ಪದಕ್ಕೆ A class or head; rank, order, arrangement; Readiness (as of money for payment) ಎಂದು ಅರ್ಥಗಳಿವೆ. ಆದ್ದರಿಂದ ವಿಲೇವಾರಿ ಅಂದರೆ assorting, classifying, distribution, settlement ಮುಂತಾದ ಅರ್ಥಗಳು ಬರುತ್ತವೆ. ೧೪ಡಿಸೆಂಬರ್೨೦೧೯ರ ವಿಜಯವಾಣಿ ಪತ್ರಿಕೆಯಲ್ಲಿ ಸಚಿತ್ರ ಸುದ್ದಿಯೊಂದಕ್ಕೆ “ತ್ಯಾಜ್ಯ ವಿಲೇಗೆ ನಿರ್ಲಕ್ಷ್ಯ" ಎಂಬ ತಲೆಬರಹದಲ್ಲಿ ‘ವಿಲೇವಾರಿ’ ಎನ್ನದೆ ‘ವಿಲೇ’ ಎಂದಷ್ಟೇ ಬಳಸಿದ್ದು ಸರಿಯೇ? - ಇದು ಅಳಿಕೆಯಿಂದ ನಾಗರಾಜ ಖಾರ್ವಿ ಅವರ ಪ್ರಶ್ನೆ. ಪತ್ರಿಕೆಗಳಿಗೆ ತಲೆಬರಹದಲ್ಲಿ ಆದಷ್ಟೂ ಕಡಿಮೆ ಅಕ್ಷರಗಳ ಬಳಕೆಯ ಗುರಿಯಿರುತ್ತದೆ. ಅದರಿಂದ ಕೆಲವೊಮ್ಮೆ ಅಪಾರ್ಥದ, ಅಸಂಬದ್ಧ ಶೀರ್ಷಿಕೆಗಳಾಗುವುದು ಇದೆಯಾದರೂ ಇಲ್ಲಿ ‘ವಿಲೇ’ ಪದಬಳಕೆ ತಪ್ಪೇನಲ್ಲ.
ಈ) ಘುಂಘರೂ ಎಂದರೆ ಹಿಂದೀ ಮತ್ತು ಉರ್ದು ಭಾಷೆಗಳಲ್ಲಿ ‘ಕಾಲ್ಗೆಜ್ಜೆ’ ಎಂಬ ಅರ್ಥ. ಹಿಂದೀ ಸಿನಿಮಾ ಹೆಸರಿನಲ್ಲೋ ಹಾಡಿನಲ್ಲೋ ಆ ಪದ ಬಂದಿದ್ದರೆ ಅದನ್ನು ಕನ್ನಡದಲ್ಲಿ ಬರೆಯುವಾಗಲೂ ‘ಘುಂಘರೂ’ ಎಂದೇ ಬರೆಯುವುದೊಳ್ಳೆಯದು. ಹಿಂದೀ ಭಾಷೆಯು ಬಳಸುವ ದೇವನಾಗರಿ ಲಿಪಿಗೂ ಕನ್ನಡಕ್ಕೂ ಹೆಚ್ಚೂಕಡಿಮೆ ಅಕ್ಷರಗಳ one-to-one mapping ಸಾಧ್ಯವಿದೆ ತಾನೆ? ಹಾಗಿರುವಾಗ ಪ್ರಜಾವಾಣಿಯ ೬ ಜನವರಿ ೨೦೨೦ರ ಸಂಚಿಕೆಯಲ್ಲಿ “ರಶ್ಮಿಕಾ-ನಿತಿನ್ ‘ಗುಂಗುರು’ ಡ್ಯಾನ್ಸ್‌ಗೆ ಹೃತಿಕ್ ಫಿದಾ" ಅಂತ ಬರೆದಿರುವುದು ತಪ್ಪಲ್ವಾ ಎಂದು ಫೀನಿಕ್ಸ್ ಅರಿಜೋನಾದಿಂದ ರಶ್ಮಿ ಕುಲಕರ್ಣಿ ಅವರ ಪ್ರಶ್ನೆ. ನಿಜ. ‘ಗುಂಗುರು’ ಎಂಬ ಕನ್ನಡದ್ದೇ ಪದ ಬೇರೆ ಇರುವುದು ಈ ತಪ್ಪನ್ನು ಇನ್ನಷ್ಟು ಘೋರವಾಗಿಸಿದೆ.
ಉ) ಮಾಜಿ ಪ್ರಧಾನಿ, ತನ್ನನ್ನು ತಾನು ಮಣ್ಣಿನ ಮಗ ಎಂದು ಕರೆಯುವ, ಹರದನಹಳ್ಳಿ ದೊಡ್ಡಗೌಡ ದೇವೇಗೌಡ ಅವರ ಪ್ರತಿಮೆಯೊಂದರ ಕೆಳಗೆ ಫಲಕದಲ್ಲಿ “ಭಾರತ ರತ್ನ ಕರ್ನಾಟಕದ ಕಣ್ಮಣಿ ದೇವದುರ್ಗ ತಾಲೂಕಿನ ದೋರೆ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೆಗೌಡರು. ಗ್ರಾಮ:ಗಾಣಧಾಳ, ತಾ|ದೇವದುರ್ಗ, ಜಿ|ರಾಯಚೂರು" ಎಂದು ಬರೆದದ್ದಿದೆ. ಇದರಲ್ಲಿ ‘ದೋರೆ’ ಪದ ಬಳಕೆ ಸರಿಯೇ ಎಂದು ರಾಯಚೂರಿನಿಂದ ರವಿ ಜಾನೇಕಲ್ ಅವರ ಪ್ರಶ್ನೆ. ದೋರೆ ಎಂಬ ಪದಕ್ಕೆ ಕಿಟ್ಟೆಲ್ ಕೋಶದಲ್ಲಿ ಕೊಟ್ಟಿರುವ ಅರ್ಥ the state of being full grown or mature ಎಂದು. ದೋರೆವಣ್ (ಪಣ್, ಹಣ್ಣು) ಅಂದರೆ A full grown almost ripe fruit. ಪ್ರತಿಮೆ ಸ್ಥಾಪಿಸಲಿಕ್ಕೆ ಹೊರಟವರೇನೋ ‘ದೊರೆ’ ಎಂಬ ಅರ್ಥದಲ್ಲಿ ಹಾಗೆ ಬರೆಸಿದ್ದಿರಬಹುದು. ಆದರೆ ದೇವೇಗೌಡರ ಮಟ್ಟಿಗೆ ‘ದೋರೆ’ ಸಹ ತಪ್ಪೇನಲ್ಲ. ಆದರೆ ಭಾರತ ರತ್ನ ಎಂಬ ವಿಶೇಷಣ ಅವರಿಗಲ್ಲ, ನಮ್ಮ ಕರ್ನಾಟಕ ರಾಜ್ಯಕ್ಕೆ ಸಂದದ್ದು ಎಂದು ಆ ವಾಕ್ಯವನ್ನು ಓದುವಾಗ ಅರ್ಥಮಾಡಿಕೊಳ್ಳಬೇಕು. ಹಾಗೆಯೇ, ಕರ್ನಾಟಕದ ಕಣ್ಮಣಿ ಎಂಬ ವಿಶೇಷಣವೂ ಅವರಿಗಲ್ಲ, ದೇವದುರ್ಗ ತಾಲೂಕಿಗೆ ಎಂದು ತಿಳಿದುಕೊಳ್ಳಬೇಕು.




