HEALTH TIPS

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜ್ಯುಬಿಲಿ ಸ್ಮಾರಕ ಕಟ್ಟಡ ಉದ್ಘಾಟನೆ - ಕೇರಳವನನು ಶಿಕ್ಷಣ ಹಬ್ ಆಗಿಸಲು ಸರಕಾರದ ಯತ್ನ: ಸಚಿವ ಕೆ.ಟಿ.ಜಲೀಲ್

          ಮಂಜೇಶ್ವರ: ವಿವಿಧ ಸಂಸ್ಕøತಿ, ಆಚಾರ, ವಿಚಾರ ಸಹಿತ ಬಹುಭಾಷೆಗಳಿರುವ ವೈವಿಧ್ಯಪೂರ್ಣ ನೆಲ ಮಂಜೇಶ್ವರ. ಸಾಹಿತ್ಯ, ಸಂಸ್ಕøತಿ ಸಹಿತ ಭಾತೃತ್ವಕ್ಕೆ ಹೆಸರಾದ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಮಹೋತ್ಸವ ಕಟ್ಟಡವು ಶೈಕ್ಷಣಿಕ ಅಭ್ಯುದಯದಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ ಎಂಬ ವಿಶ್ವಾಸ ತನಗಿದೆ ಎಂದು ಕೇರಳ ಉನ್ನತ ಶಿಕ್ಷಣ ಸಚಿವ ಡಾ.ಕೆ.ಟಿ ಜಲೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
          ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಮಹೋತ್ಸವ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
           ಮಹಾಕವಿ ಗೋವಿಂದ ಪೈಯವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ನಾಡಿನಲ್ಲಿ ಶೈಕ್ಷಣಿಕ ಶ್ರೀಮಂತಿಕೆಯನ್ನು ನೋಡುವಂತಾಗಿದೆ. ಸುಮಾರು 30 ವರ್ಷಗಳ ಹಿಂದೆ ಆರಂಭಗೊಂಡ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಮಹೋತ್ಸವ ಕಟ್ಟಡವು ಶಾಸಕ ನಿಧಿಯಿಂದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇದರ ಹಿಂದೆ ಶ್ರಮಿಸಿದ ಮಾಜಿ ಶಾಸಕ ದಿ. ಪಿ.ಬಿ ಅಬ್ದುಲ್ ರಜಾಕ್ ಅವರ ಶ್ರಮವನ್ನು ಸ್ಮರಿಸಿದರು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಸಹಿತ ಕಾಲೇಜುಗಳು ನಾಡಿನ ಭಾತೃತ್ವ, ಸಹೋದರತೆ ಸಹಿತ ವೈವಿಧ್ಯತೆಯನ್ನು ಬೆಳಗುವ ಶಿಕ್ಷಣ ಕೇಂದ್ರಗಳಾಗಿವೆ. ಸರ್ಕಾರಿ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿರುವ ರಾಜ್ಯ ಸರ್ಕಾರವು ಶಾಲಾ, ಕಾಲೇಜುಗಳ ಭೌತಿಕ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದರು.
        ರಾಜ್ಯದಲ್ಲಿರುವ ಒಟ್ಟು 5 ಲಕ್ಷ ಸರ್ಕಾರಿ ಉದ್ಯೋಗಸ್ಥರಲ್ಲಿ ಸುಮಾರು 2.5 ಲಕ್ಷ ಜನ ಶಿಕ್ಷಕರಾಗಿದ್ದಾರೆ. ಗುಣಮಟ್ಟದ ಶಿಕ್ಷಣ ಸರ್ಕಾರದ ಲಕ್ಷ್ಯವಾಗಿದ್ದು, ಉನ್ನತ ವಿದ್ಯಾಭ್ಯಾಸಕ್ಕೂ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದರು. ಸರ್ಕಾರಿ ಶಾಲಾ, ಕಾಲೇಜು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಸಹಿತ ತಿಳುವಳಿಕೆ ಮತ್ತು ವ್ಯಕ್ತಿತ್ವ ರೂಪಿಸುವ ಗುಣಗಳು ನಿರ್ಮಾಣವಾಗುತ್ತದೆ ಎಂದರು. ಶಾಲಾ ಕಾಲೇಜುಗಳಂತೆ ಪದವಿ ಮತ್ತು ಉನ್ನತ ಪದವಿ ಕಾಲೇಜುಗಳ ಶೈಕ್ಷಣಿಕ ತರಗತಿಗಳು ಜೂನ್ ತಿಂಗಳಲ್ಲೇ ಆರಂಭವಾಗುವಂತಾಗಬೇಕು. ರಾಜ್ಯದ ಎಲ್ಲ ವಿ.ವಿ ಗಳ ಫಲಿತಾಂಶಗಳು ಏಕಕಾಲಕ್ಕೆ ಪ್ರಕಟಿಸುವಂತಾಗಬೇಕು. ಉನ್ನತ ಶಿಕ್ಷಣ ರಂಗದಲ್ಲಿ ಬದಲಾವಣೆ ತರುವಲ್ಲಿ ಶಿಕ್ಷಕರು, ವಿದ್ಯಾರ್ಥಿ, ಪೋಷಕರು ಸಹಿತ ಆಡಳಿತ ವರ್ಗದ ಕಾರ್ಯವೈಖರಿ ಅತಿ ಮುಖ್ಯವಾಗಿದೆ ಎಂದರು. ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದ ಬಗ್ಗೆ ಉಲ್ಲೇಖಿಸಿದ ಸಚಿವರು- ತಾನು ವೈವಿಧ್ಯಮಯವಾದ ಸಂಸ್ಕøತಿ, ಆಚರಣೆ, ಧರ್ಮ ಪರಂಪರೆ, ಹಲವು ಭಾಷೆಗಳಿರುವ ನಾಡಿನಿಂದ ಬಂದಿದ್ದೇವೆ ಎಂಬ ಹೆಮ್ಮೆಯಿಂದ ಹೇಳಿದ್ದರು. ಇಂತಹ ವೈವಿಧ್ಯಪೂರ್ಣ ಬಹುಸ್ಪುರತೆ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇರಬೇಕಿದೆ. ಭಾರತ ದೇಶದ ಶಕ್ತಿಯೂ ವಿವಿಧತೆಯಲ್ಲಿ ಏಕತೆ ಎಂಬುದಾಗಿದೆ ಎಂದರು. ನಮ್ಮ ದೇಶದ ಇಂತಹ ಮಾದರಿ ಹಾದಿಯನ್ನು ಬೇರೆ ದೇಶಗಳು ಅನುಸರಿಸುವಂತಾಗಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಆಧುನಿಕ ಕಾಲಘಟ್ಟದಲ್ಲಿ ಸಂಕುಚಿತ ಮನೋಭಾವವನ್ನು ಕೈ ಬಿಡಬೇಕಿದೆ ಎಂದರು. ಶಿಕ್ಷಣ ಕೇಂದ್ರಗಳು ದೇಶದ ಆಸ್ಮಿತೆ, ಬಹುತ್ವ, ವೈವಿಧ್ಯತೆ ಸಹಿತ ಏಕತೆಯನ್ನು ಬೆಳಗುವ ಕೇಂದ್ರಗಳಾಗಲಿ ಎಂದು ಹಾರೈಸಿದರು.
           ಮಂಜೇಶ್ವರ ಕಾಲೇಜಿನಲ್ಲಿ ವಿವಿಧ ಸ್ನಾತಕೋತ್ತರ ಪದವಿ ವಿಭಾಗಗಳನ್ನು ತೆರೆಯುವ ಬಗ್ಗೆ ತಜ್ಞರ ತಂಡದಿಂದ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಆ ಮೂಲಕ ಹೊಸ ಪದವಿ ತರಗತಿಗಳ ಆರಂಭಿಸುವಿಕೆ ಬಗ್ಗೆ ಧನಾತ್ಮಕ ಹೆಜ್ಜೆ ಇಡಲಾಗುವುದಾಗಿ ಹೇಳಿದರು. ಮಂಜೇಶ್ವರದಲ್ಲಿ ಪಾಲೆಟೆಕ್ನಿಕ್ ಕಾಲೇಜು ಆರಂಭಿಸಬೇಕೆಂಬ ಬೇಡಿಕೆ ಬಗ್ಗೆ ಮಾತನಾಡಿದ ಸಚಿವರು ಪೈವಳಿಕೆ ಗ್ರಾ.ಪಂ ಪರಿಧಿಯಲ್ಲಿ ಈಗಾಗಲೇ ಐ.ಟಿ.ಐ ಆರಂಭಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಅಲ್ಪಸಂಖ್ಯಾತ ಸಮುದಾಯದ ಅಧ್ಯಯನ ಕೇಂದ್ರವನ್ನು ತೆರೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
          ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಸಿ ಕಮರುದ್ದೀನ್ ಅವರು ಬಹುಭಾಷಾ ಸಂಗಮ ಭೂಮಿಗೆ ಆಗಮಿಸಿ ಸ್ಮಾರಕ ಕಾಲೇಜಿನ ಮಹೋತ್ಸವ ಕಟ್ಟಡ ಉದ್ಘಾಟಿಸಿದ ಸಚಿವರಿಗೆ ಧನ್ಯವಾದ ತಿಳಿಸಿದರು. ಮಂಜೇಶ್ವರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ರಾಜಕೀಯ ಮರೆತು ಪ್ರಯತ್ನಿಸಲಾಗುವುದು. ತಾಲೂಕು ಆಸ್ಪತ್ರೆ, ಪಾಲಿಟೆಕ್ನಿಕ್ ಕಾಲೇಜು, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗಗಳ ಆರಂಭಿಸುವಿಕೆ ಬಗ್ಗೆ ಸಚಿವರ ಗಮನ ಸೆಳೆದರು.  ಸರ್ಕಾರಿ ಸಿಬ್ಬಂದಿಗಳು ಮಂಜೇಶ್ವರ ಕ್ಷೇತ್ರದ ಹಲವು ಇಲಾಖೆ ಕಚೇರಿಗಳಲ್ಲಿ ಸೇವೆ ನಿರ್ವಹಿಸಲು ಹಿಂಜರಿಯುತ್ತಾರೆ. ಇಂತಹ ಹಿಂಜರಿತ ಈ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ. ಇಲ್ಲಿರುವ ಮತ ಸೌಹಾರ್ದತೆ, ಧಾರ್ಮಿಕ ಸಹಬಾಳ್ವೆ ಎಲ್ಲಿಯೂ ಕಾಣಲಸಾಧ್ಯವಾಗಿದ್ದು ಸರ್ಕಾರಿ ಸಿಬ್ಬಂದಿಗಳು ಮಂಜೇಶ್ವರದಲ್ಲಿ ವೃತ್ತಿ ಜೀವನ ನಡೆಸಲು ಹೆಚ್ಚಿನ ಉತ್ಸುಕತೆ ತೋರಬೇಕಿದೆ ಮಾತ್ರವಲ್ಲದೆ ಮಂಜೇಶ್ವರದ ಏಳಿಗೆಗೂ ಶ್ರಮಿಸಬೇಕಿದೆ ಎಂದು ವಿನಂತಿಸಿದರು.
        ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಸುನಿಲ್ ಜಾನ್.ಜೆ, ಸಹ ಪ್ರಾಂಶುಪಾಲೆ ಅಮಿತಾ.ಎಸ್, ಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಗೋವಿಂದ ಪೈ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್ ಜಯಾನಂದ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಸದಸ್ಯೆ ಹಸೀನಾ.ಕೆ, ಜನಪ್ರತಿನಿಧಿಗಳಾದ ಅಬ್ದುಲ್ ರಜಾಕ್ ಚಿಪ್ಪಾರು, ಮಣಿಕಂಠ ರೈ, ಶಿಕ್ಷಕ ರಕ್ಷಕ ಸಂಘದ ರಾಜನ್.ವಿ, ಕಾಲೇಜು ವಿದ್ಯಾರ್ಥಿ ಸಂಘದ ಜಿತಿನ್ ರಾಜ್, ಕುಟುಂಬಶ್ರೀ ಅಧ್ಯಕ್ಷೆ ಜ್ಯೋತಿಪ್ರಭಾ.ಪಿ, ಮೊದಲಾದವರಿದ್ದರು. ಪ್ರಾಂಶುಪಾಲ ಡಾ. ಸುನಿಲ್ ಜಾನ್.ಜೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ.ಪಿ.ಎಂ ಸಲೀಂ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries