ಪೆರ್ಲ: ಸಾಹಿತ್ಯ-ಸಾಂಸ್ಕøತಿಕ ಸಾಮಾಜಿಕ ನಾಡು,ನುಡಿಸೇವೆಯಲ್ಲಿ ಮುಂಚೂಣಿಯಲ್ಲಿರುವ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ಇದರ ನೇತೃತ್ವದಲ್ಲಿ ವಿಶೇಷ ತಿಂಗಳ ಕಾರ್ಯಕ್ರಮದ ಭಾಗವಾಗಿ ಮಕರ ಸಂಕ್ರಾಂತಿ ಸಾಹಿತ್ಯ ಸಂಭ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ನಾಳೆ(ಭಾನುವಾರ) ಅಪರಾಹ್ನ 2 ರಿಂದ ಪೆರ್ಲದ ವ್ಯಾಪಾರಿ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಶಿಕ್ಷಕ, ಧಾರ್ಮಿಕ, ಸಾಮಾಜಿಕ ಮುಂದಾಳು ಸದಾನಂದ ಶೆಟ್ಟಿ ಕುದ್ವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಉದ್ಘಾಟಿಸುವರು. ಜಾನಪದ-ಯಕ್ಷಗಾನ ವಿದ್ವಾಂಸ, ಪ್ರಾಧ್ಯಾಪಕ ಡಾ.ಸುಂದರ ಕೇನಾಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಯಕ್ಷಗಾನ ಭಾಗವತಿಕೆ-ತೆಂಕು, ಬಡಗು ತಿಟ್ಟುಗಳ ಮಹಾನ್ ಅಧ್ಯಯನ ಪ್ರಬಂಧಕ್ಕೆ ಲಭಿಸಿದ ಡಾಕ್ಟರೇಟ್ ಪದವೀಧರರಾದ ಶಿಕ್ಷಕ, ಭಾಗವತ ಡಾ.ಸತೀಶ್ ಪುಣಿಚಿತ್ತಾಯ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ, ಪ್ರಾಧ್ಯಾಪಕ ಟಿ.ಎ.ಎನ್.ಖಂಡಿಗೆ ಅಭಿನಂದನಾ ಭಾಷಣ ಮಾಡುವರು.
ಸಾಹಿತಿ, ಪತ್ರಕರ್ತ, ವೇದಿಕೆಯ ನಿರ್ದೇಶಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕಾರ್ಟೂನ್ ಕಾಸರಗೋಡು ಘಟಕದ ಅಧ್ಯಕ್ಷ, ವೇದಿಕೆಯ ನಿರ್ದೇಶಕ ವೆಂಕಟ್ ಭಟ್ ಎಡನೀರು, ಹಿರಿಯ ಸಾಹಿತಿ, ವೇದಿಕೆಯ ನಿರ್ದೇಶಕ ಹರೀಶ್ ಪೆರ್ಲ, ಸಾಹಿತಿ, ಜಲತಜ್ಞ ಗಣಪತಿ ಭಟ್ ಮಧುರಕಾನನ ಉಪಸ್ಥಿತರಿರುವರು.
ಈ ಸಂದರ್ಭ ವಿಶೇಷವಾಗಿ ಆಯೋಜಿಸಲಾಗುವ ಸಣ್ಣ ಕಥೆಗಳ ಗೋಷ್ಠಿಯಲ್ಲಿ ಶಿಕ್ಷಕಿ, ಸಾಹಿತಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಹಿರಿಯ, ಕಿರಿಯ ಕಥೆಗಾರರು ಭಾಗವಹಿಸುವರು. ಸಮಾರಂಭದ ವಿಶೇಷ ಆಕರ್ಷಣೆಯಾಗಿ ವೆಂಕಟ್ ಭಟ್ ಎಡನೀರು ಅವರ ಕಾರ್ಟೂನ್ ಗಳ ಪ್ರದರ್ಶನ ಏರ್ಪಡಿಸಲಾಗಿದೆ.


