ಬದಿಯಡ್ಕ: ಆರ್ಥಿಕವಾಗಿ ಹಿಂದುಳಿದಿರುವ ಅನೇಕರನ್ನು ಮೇಲೆತ್ತುವಲ್ಲಿ ಕೇರಳ ದಿನೇಶ್ ಬೀಡಿ ಉದ್ದಿಮೆಯು ಪ್ರಧಾನ ಪಾತ್ರವನ್ನು ವಹಿಸಿದೆ. ಸರಕಾರದ ಮೇಲ್ನೋಟದಲ್ಲಿದ್ದು, ಸ್ವಯಂ ಉದ್ಯೋಗವನ್ನು ನೀಡಿದ ಈ ಸಂಸ್ಥೆಯು ಬದಿಯಡ್ಕದ ಅನೇಕ ಕುಟುಂಬಗಳಿಗೆ ಆಸರೆಯಾಗಿದ್ದು, 50ನೇ ವರ್ಷವನ್ನು ಆಚರಿಸುತ್ತಿರುವುದು ಸಂತೋಷದಾಯಕ ವಿಚಾರವಾಗಿದೆ. ಇದನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಬದಿಯಡ್ಕದಲ್ಲಿರುವ ಕೇರಳ ದಿನೇಶ್ ಬೀಡಿ, ಬೀಡಿ ಕಾರ್ಮಿಕರ ವ್ವವಸಾಯ ಸಹಕಾರಿ ಸಂಘದ 50ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉತ್ಸವ ಸಮಿತಿ ಸಂಚಾಲಕ ಬಿ.ಕೃಷ್ಣ ಬದಿಯಡ್ಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೇರಳ ದಿನೇಶ್ ಬೀಡಿ ಕೇಂದ್ರ ಸಂಘದ ಡೈರೆಕ್ಟರ್ ಬೇಬಿ ಶೆಟ್ಟಿ `ಬೀಡಿ ವ್ಯವಸಾಯ ಎದುರಿಸುತ್ತಿರುವ ಸಮಸ್ಯೆಗಳು' ವಿಚಾರದಲ್ಲಿ ಕಾರ್ಯಾಗಾರವನ್ನು ನಡೆಸಿಕೊಟ್ಟು ಮಾತನಾಡಿ ಅನೇಕ ಸಹೋದರಿಯರಿಗೆ ಮನೆಯಲ್ಲೇ ಆದಾಯವನ್ನು ದೊರಕಿಸಿಕೊಟ್ಟ ಈ ಉದ್ದಿಮೆಯು 1958ನೇ ಇಸವಿಯಲ್ಲಿ ಪ್ರಾರಂಭವಾಗಿದೆ. ಹಿರಿಯರ ಹೋರಾಟ ಶ್ರಮದ ಫಲವಾಗಿ ಕೇರಳ ದಿನೇಶ್ ಬೀಡಿ ಎಂಬ ಹೆಸರಿನಲ್ಲಿ ಒಂದು ಕಾಲದಲ್ಲಿ 45,000 ಮಂದಿಗೆ ಉದ್ಯೋಗವನ್ನು ನೀಡಿದ ಸಂಸ್ಥೆಯಾಗಿದೆ. ನಾನಾ ರೀತಿಯ ನಿಯಮಾವಳಿಗಳಿಂದಾಗಿ ಇಂದು ಸಂಸ್ಥೆಯು ಸಂಕಷ್ಟವನ್ನನುಭವಿಸುತ್ತಿದ್ದರೂ, ಸಂಸ್ಥೆಯ ಮೂಲಕ ಅನೇಕ ತಾಯಂದಿರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಶ್ರಮವಹಿಸಿದ ಹಿರಿಮೆಯಿದೆ ಎಂದು ತಿಳಿಸಿದರು. ಸಂಘದಲ್ಲಿ ಹೆಚ್ಚಿನ ಎಲೆ ಸಮತೋಲನ ಕಾಯ್ದುಕೊಂಡ ಕಾರ್ಮಿಕರಿಗೆ ಬೀಡಿ ವೆಲ್ಫೇರ್ ಬೋರ್ಡ್ ಮೆಂಬರ್ ಟಿ.ಕೃಷ್ಣನ್ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ಉತ್ಸವ ಸಮಿತಿಯ ಸಹಸಂಚಾಲಕ ಸುಧಾಕರ ಬಿ. ಸ್ವಾಗತಿಸಿದರು. ಹಿರಿಯರಾದ ಪಿ.ಎನ್.ಆರ್. ಅಮ್ಮಣ್ಣಾಯ, ಚಂದ್ರಶೇಖರ ಶೆಟ್ಟಿ, ಮದನ, ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು. ಬೆಳಗ್ಗೆ ಸಂಸ್ಥೆಯ ಪರಿಸರದಿಂದ ಬದಿಯಡ್ಕ ಪೇಟೆಯಲ್ಲಿ ಚೆಂಡೆ, ಮುತ್ತುಕೊಡೆಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.


