ಕಾಸರಗೋಡು: ಆಲಂಪಾಡಿ ವೆಂಕಟೇಶ ಶ್ಯಾನುಭೋಗ್ ಮೆಮೋರಿಯಲ್ 35 ನೇ ಸಂಗೀತೋತ್ಸವ ಜ.26 ರಂದು ಮಧ್ಯಾಹ್ನ 2 ರಿಂದ ಎಸ್.ವಿ.ಟಿ. ರಸ್ತೆಯ `ವೆಂಕಟೇಶ' ದಲ್ಲಿ ನಡೆಯಲಿದೆ.
ಮಧ್ಯಾಹ್ನ 2 ರಿಂದ ಶಿಷ್ಯ ವೃಂದದವರಿಂದ ಸಂಗೀತಾರಾಧನ, ಸಂಜೆ 5.30 ಕ್ಕೆ ಕೆ.ಕೃಷ್ಣ ಶ್ಯಾನುಭೋಗ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಿಪಿಸಿಆರ್ ಐಯ ನಿರ್ದೇಶಕಿ ಡಾ.ಅನಿತಾ ಕರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ವಿದುಷಿ ಶಕುಂತಳಾ ಕೃಷ್ಣ ಭಟ್ ಕುಂಚಿನಡ್ಕ ಅವರಿಗೆ ಎ.ವಿ.ಎಸ್. ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಜೆ 6 ರಿಂದ ವಿದ್ವಾನ್ ವಿ.ಆರ್.ದಿಲೀಪ್ ಕುಮಾರ್ ತ್ರಿಚ್ಚೂರು ಅವರು ಸಂಗೀತ ಕಚೇರಿ ನೀಡುವರು. ವಯಲಿನ್‍ನಲ್ಲಿ ವಿದ್ವಾನ್ ಕೆ.ಜೆ.ದಿಲೀಪ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಡಾ|ಶಂಕರ್‍ರಾಜ್, ಘಟಂನಲ್ಲಿ ವಿದ್ವಾನ್ ಸಂತೋಷ್ ಕುಮಾರ್ ಸಹಕರಿಸುವರು.
ಶಕುಂತಲಾ ಕುಂಚಿನಡ್ಕ : ಬಂಟ್ವಾಳ ತಾಲೂಕಿನ ಅಳಿಕೆಯ ಜೆಡ್ಡು ಗಣಪತಿ ಭಟ್ ಹಾಗೂ ಜೆಡ್ಡು ಗೌರಮ್ಮ ಅವರ ಪುತ್ರಿಯಾದ ಶಕುಂತಲಾ ಕೃಷ್ಣ ಭಟ್ ಕುಂಚಿನಡ್ಕ 1943 ನ.11 ರಂದು ಜನಿಸಿದರು. ಸಂಗೀತ ಪರಂಪರೆಯ ಹಿನ್ನಲೆಯಿಂದ ಬಂದ ಅವರಿಗೆ ಸಂಗೀತದತ್ತ ಒಲವು ಹೆಚ್ಚಾಗಿಯೇ ಇದ್ದಿತು. ಅವರಿಗೆ ಅಮ್ಮನೇ ಮೊದಲ ಗುರು. ಹತ್ತು ವರ್ಷಗಳ ತನಕ ಅಮ್ಮನಿಂದಲೇ ಸಂಗೀತಾಭ್ಯಾಸ. ಹತ್ತು ವರ್ಷಗಳ ನಂತರ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಬಳಿ ಸಂಗೀತಾಭ್ಯಾಸ ಮುಂದುವರೆಸಿದರು. ಮುಂದಕ್ಕೆ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಸುಮಾರು 45 ವರ್ಷಗಳ ಹಿಂದೆ ಮದ್ರಾಸ್ ವಿಶ್ವವಿದ್ಯಾನಿಲಯ ಮಟ್ಟದ ಪರೀಕ್ಷೆಗಳನ್ನು ಪೂರೈಸಿದರು. ಇವರ ಸಂಗೀತ ಕ್ಷೇತ್ರದ ಸಾಧನೆಗೆ ಅಮ್ಮನೇ ಸೂರ್ತಿ.
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಮ್ಯೆಸೂರು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಹಲವಾರು ಕೇಂದ್ರಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಶೋತೃಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2016 ರ ಡಿಸಂಬರದಲ್ಲಿ ಕಾಸರಗೋಡಿನ ಕೆಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರಿಯ ಸಮ್ಮೇಳನದಲ್ಲಿ ಕಛೇರಿ ನಡೆಸಿದ ಹೆÉಗ್ಗಳಿಕೆ ಇವರದು. 75 ರ ಹರೆಯದಲ್ಲಿರುವ ಶಕುಂತಳಾ ತಮ್ಮ ಕಂಠಸಿರಿಯನ್ನು ಈಗಲೂ ಕಾಪಾಡಿಕೊಂಡು ಬಂದಿದ್ದಾರೆ.
ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿಸುವ ಇವರು ಉತ್ತಮ ಶಿಷ್ಯ ವೃಂದವನ್ನು ಹೊಂದಿದ್ದಾರೆ. ಇವರ ಶಿಷ್ಯರಲ್ಲಿ ಅನೇಕರು ಕರ್ನಾಟಕ ಪ್ರೌಡ ಶಿಕ್ಷಣ ಮಂಡಳಿ ನಡೆಸುವ ವಿದ್ವತ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕಳೆದ ವರ್ಷ ನಡೆದ ವಿದ್ವತ್ ಪರೀಕ್ಷೆಯಲ್ಲಿ ಇವರ ಶಿಷ್ಯೆ ಮೂರನೇ ರ್ಯಾಂ ಕ್ ಪಡೆದಿರುವುದು ಇವರ ಹಿರಿಮೆ. ಕೆಲವರು ಆಕಾಶವಾಣಿ ಕಲಾವಿದರಾಗಿರುತ್ತಾರೆ ಅಲ್ಲದೆ ಸಂಗೀತ ತರಗತಿಯನ್ನು ನಡೆಸುತ್ತಿದ್ದಾರೆ.


