ಉಪ್ಪಳ: ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯ ವಾರ್ಷಿಕೋತ್ಸವ ಮತ್ತು ಈ ವರ್ಷ ನಿವೃತ್ತರಾಗಲಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಸಮ್ಮಾನ ಸಮಾರಂಭ ಇತ್ತೀಚೆಗೆ ಜರುಗಿತು.
ಶಾಲಾ ವ್ಯವಸ್ಥಾಪಕ ಕುರಿಯ ಗೋಪಾಲಕೃಷ್ಣ ಭಟ್ ಅವರು ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್. ಅವರು ಎಸ್.ಎಸ್.ಎಲ್.ಸಿ. ಯಲ್ಲಿ ಸತತವಾಗಿ ಉತ್ತಮ ಫಲಿತಾಂಶವನ್ನು ಪಡೆಯುತ್ತಿರುವ ಈ ಕನ್ನಡ ಮಾಧ್ಯಮ ಶಾಲೆಯು ಕಲಿಯುವಿಕೆಗೆ ಪೂರಕವಾದ ಪರಿಸರ, ಸೌಲಭ್ಯಗಳನ್ನು ಹೊಂದಿದ್ದು ಉಳಿದ ಶಾಲೆಗಳಿಗೆ ಅನುಕರಣೀಯವಾಗಿದೆ ಎಂದರು.
ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಗಾಯತ್ರಿ ಕೆ. ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಪೈವಳಿಕೆ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಇದೇ ಸಂದರ್ಭದಲ್ಲಿ, ಈ ವರ್ಷ ನಿವೃತ್ತಿ ಹೊಂದಲಿರುವ ಕನ್ನಡ ಅಧ್ಯಾಪಕ ಶ್ರೀಪತಿ ಭಟ್ ಪದ್ಯಾಣ ಹಾಗೂ ಬೋಧಕೇತರ ಸಿಬ್ಬಂದಿ ಈಶ್ವರ ನಾಯ್ಕ ಪೆರ್ನಮೊಗೆರು ಅವರನ್ನು ಸಮ್ಮಾನಿಸಲಾಯಿತು. ಶಾಲಾ ಸಂಚಾಲಕ ಗೋಪಾಲಕೃಷ್ಣ ಭಟ್ ಮತ್ತು ಅಧ್ಯಾಪಿಕೆ ಕಮಲಾಕ್ಷಿ ಅಭಿನಂದನಾ ಭಾಷಣ ಮಾಡಿದರು. ಅಧ್ಯಾಪಿಕೆಯರಾದ ಗೀತಾ ಬಾಲಿ ಹಾಗೂ ಕಾವ್ಯ ಕುಮಾರಿ ಸಮ್ಮಾನ ಪತ್ರ ವಾಚಿಸಿದರು. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯ ಚನಿಯ ಕೊಮ್ಮಂಗಳ, ನಿವೃತ್ತ ಕನ್ನಡ ಅಧ್ಯಾಪಕ ಕೆ.ಟಿ.ಭಟ್, ಹಳೆ ವಿದ್ಯಾರ್ಥಿ ಡಾ.ರಾಮ ಪ್ರಕಾಶ ಸಾಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಆನೆಕಲ್ಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲೆಯ ಹಳೆ ವಿದ್ಯಾರ್ಥಿಗಳೂ ನಿವೃತ್ತರಾಗಲಿರುವವರನ್ನು ಸಮ್ಮಾನಿಸಿದರು. ಇದೇ ವೇಳೆ ಶಾಲೆಯ ಅಭಿವೃದ್ಧಿ ಯೋಜನೆಗಳನ್ನೊಳಗೊಂಡ ಹಳೆ ವಿದ್ಯಾರ್ಥಿ ಸಂಘದ ವಿಜ್ಞಾಪನಾ ಪತ್ರವನ್ನು ಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಬಿಡುಗಡೆಗೊಳಿಸಿದರು. ಮಾತೃ ಸಂಘದ ಅಧ್ಯಕ್ಷೆ ರೇವತಿ ಪಾರೆಕೋಡಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸೀತಾರಾಮ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಾಪಿಕೆ ಸಲಿಲ ಕುಮಾರಿ ಸ್ವಾಗತಿಸಿ, ಅಧ್ಯಾಪಕ ರಾಮಕೃಷ್ಣ ಪ್ರಸಾದ್ ವಂದಿಸಿದರು. ಅಧ್ಯಾಪಕ ಸುರೇಶ್ ಎನ್. ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ನಡೆಸಿಕೊಟ್ಟ ವೈವಿಧ್ಯಮಯ ಕಾರ್ಯಕ್ರಮಗಳು ರಂಜಿಸಿದವು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳಿಗೂ ಔಷಧೀಯ ಸಸ್ಯವನ್ನೊಳಗೊಂಡ ಕುಂಡವೊಂದನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.


