ಮಂಜೇಶ್ವರ: ಸ್ಥಳೀಯ `ರಾಗಸುಧಾ' ಸಂಗೀತ ಶಾಲೆಯ ವಾರ್ಷಿಕೋತ್ಸವ `ಸಂಗೀತಾರ್ಪಣಮ್' ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅರ್ಥಾ ಪೆರ್ಲ ಅವರಿಂದ ನೃತ್ಯಾರ್ಪಣ ಎಂಬ ವಿಶೇಷ ಭರತನಾಟ್ಯ ಪ್ರದರ್ಶನ ಶ್ರೀ ಗುರುನರಸಿಂಹ ಸಭಾಭವನದಲ್ಲಿ ಜರಗಿತು. ನಟುವಾಂಗದಲ್ಲಿ ವಿದುಷಿ ಅಯನಾ ಪೆರ್ಲ, ಹಾಡುಗಾರಿಕೆಯಲ್ಲಿ ಶಿಲ್ಪಾ ವಿಶ್ವನಾಥ ಭಟ್, ಮೃದಂಗದಲ್ಲಿ ಭಾರ್ಗವ ಕುಂಜತ್ತಾಯ ಮತ್ತು ಕೊಳಲಿನಲ್ಲಿ ಅಭಿಷೇಕ್ ಎಂ.ಬಿ. ಸಹಕರಿಸಿದರು.
ದಕ್ಷಿಣ ಭಾರತದ ಹಲವು ಕಡೆ ಪ್ರದರ್ಶನ ನೀಡಿ ಪ್ರಸಿದ್ಧರಾಗಿರುವ ವಿದುಷಿ ಅರ್ಥಾ ಪೆರ್ಲ ಅವರು ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ದೂರದರ್ಶನದ ಗ್ರೇಡೆಡ್ ಕಲಾವಿದೆಯೂ ಆಗಿದ್ದಾರೆ.
ಸಂಗೀತಾರ್ಪಣಂ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಗಣೇಶ್ ಮೋಹನ್ ಕಾಶೀಮಠ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರು ನರಸಿಂಹ ದತ್ತಿ ಮಂಡಳಿಯ ಅಧ್ಯಕ್ಷರಾದ ಶ್ರೀಧರ ರಾವ್ ಮತ್ತು ಸಂಗೀತ ಗುರುಗಳಾದ ವಿದ್ವಾನ್ ನಾರಾಯಣ ಭಟ್ ಉಂಡೆಮನೆ ಶುಭಾಶಂಸನೆಗೈದರು. ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮಗಳು ಜರಗಿದವು.
ಮಂಗಳೂರಿನ ನಾದ ಸರಸ್ವತಿ ಸಂಗೀತ ವಿದ್ಯಾಲಯದ ಗುರುಗಳಾದ ವಿದುಷಿ ಸತ್ಯವತಿ ಮುಡಂಬಡಿತ್ತಾಯ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ರಾಗಸುಧಾ ಸಂಗೀತ ಶಾಲೆಯ ಶಿಲ್ಪಾ ವಿಶ್ವನಾಥ ಭಟ್ ಉಪಸ್ಥಿತರಿದ್ದರು. ಮಹಾಬಲೇಶ್ವರ ಭಟ್ ಅವರು ಸ್ವಾಗತಿಸಿದರು. ಪ್ರಕಾಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಟಿ.ಡಿ.ಸದಾಶಿವ ರಾವ್ ವಂದಿಸಿದರು.


