ಕುಂಬಳೆ: ರಾಷ್ಟ್ರೀಯ ಕನ್ನಡ ಪರಿಷತ್ತು ಕಾಸರಗೋಡು ಇದರ ಆಶ್ರಯದಲ್ಲಿ ಏಪ್ರಿಲ್ 10, 11 ಮತ್ತು 12 ರಂದು ಸರೋವರ ದೇವಾಲಯ ಅನಂತಪುರ ಪರಿಸರದಲ್ಲಿ ನಡೆಯಲಿರುವ ಬೃಹತ್ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನ ಸಮಾಲೋಚನಾ ಸಭೆ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಮಾಲೋಚನಾ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ. ಅಧ್ಯಕ್ಷತೆ ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ಉದ್ಯಮಿ ರಾಂ ಪ್ರಸಾದ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ, ಬ್ಲಾಕ್ ಪಂಚಾಯತಿ ಸದಸ್ಯರಾದ ಸತ್ಯಶಂಕರ ಭಟ್, ಪ್ರಸಾದ್ ರೈ ಮೊದಲಾದವರು ಮಾತನಾಡಿದರು.
ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೃಜನ ಶಾಂತಿಪಳ್ಳ ವಂದಿಸಿದರು.
ಈ ಸಮ್ಮೇಳನ ಕನ್ನಡ ಪರ ಹೋರಾಟಗಳಿಗೆ ಬೆನ್ನೆಲುಬು ಆಗಬೇಕು ಹಾಗು ಕನ್ನಡಿಗರ ಸ್ವಾಭಿಮಾನದ ಸಮಾವೇಶವಾಗಿ ಮೂಡಿಬರಬೇಕೆಂದು ಸಭೆಯಲ್ಲಿ ಮಾತನಾಡಿದವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಸಭೆಯನ್ನು ಫೆ.2 ರಂದು ಬೆಳಗ್ಗೆ 10 ಗಂಟೆಗೆ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸಮ್ಮೇಳನದ ಸವಿವರವನ್ನು ಭಾಸ್ಕರ ಕಾಸರಗೋಡು ಅವರು ನೀಡಿದರು. ಸಭೆಯಲ್ಲಿ ಕನ್ನಡಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆಯೂ ಅಭಿಪ್ರಾಯ ವ್ಯಕ್ತವಾಯಿತು.


