ಕಾಸರಗೋಡು: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ (ಕೋಸ್ಟಲ್ ರೆಗ್ಯುಲೇಷನ್ ಝೋನ್) ಕಾನೂನು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ ಮಾಹಿತಿ ಸಂಗ್ರಹಿಸಲಾದ ಪಟ್ಟಿಯಲ್ಲಿ ಸೇರ್ಪಡೆಗೊಂಡವರಿಗಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಅಹವಾಲು ಸ್ವೀಕಾರ ಸಭೆ ಜರುಗಿತು. ಈ ರೀತಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ 1261 ಮಂದಿಗಾಗಿ ಚೆರ್ಕಳ ಐಮ್ಯಾಕ್ಸ್ ಸಭಾಂಗಣದಲ್ಲಿ ಅಹವಾಲು ಸ್ವೀಕಾರ ನಡೆಸಲಾಯಿತು. ಇವರಲ್ಲಿ 516 ಮಂದಿ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಜನತೆಯನ್ನು ಬಸವಳಿಸುವ ನಿಟ್ಟಿನಲ್ಲಿ ಅಲ್ಲ, ಬದಲಾಗಿ ಸಹಾಯ ಒದಗಿಸಲು ಈ ಅಹವಾಲು ಸ್ವೀಕಾರ ಸಭೆ ನಡೆಸಲಾಗುತ್ತಿದೆ. ಪಟ್ಟಿಯಲ್ಲಿ ತಪ್ಪು ಮಾಹಿತಿಯ ಹಿನ್ನೆಲೆಯಲ್ಲಿ ಹೆಸರು ಸೇರ್ಪಡೆ ಸಾಧ್ಯವಿದೆ. ಅಂಥವರು ಈ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡಿ, ಅದರಿಂದ ತೆರವುಗೊಳ್ಳುವ ಅವಕಾಶ ನೀಡುವ ನಿಟ್ಟಿನಲ್ಲಿ ಈ ಸಭೆ ಸಹಕಾರಿ. ತಪ್ಪಿತಸ್ಥರ ವಿರುದ್ಧ ಮತ್ತು ತಪ್ಪು ಮಾಹಿತಿ ಹರಡುವವರ ಕಾನೂನುಕ್ರಮ ಕೈಗೊಳ್ಳಲಾಗುವುದು. ಬೇರಾವುದೇ ಗಣತಿಗೂ ಈ ಸಭೆಗೂ ಸಂಬಂಧವಿಲ್ಲ ಎಂದು ಎಂದು ತಿಳಿಸಿದರು.
5 ಕೌಂಟರ್ ಗಳಲ್ಲಿ ಅಹವಾಲು ಸ್ವೀಕಾರ ನಡೆಯಿತು. ಮಂಗಲ್ಪಾಡಿ ಗ್ರಾಮಪಂಚಾಯತ್ ನಿಂದ 301 ಮಂದಿ, ಚೆರುವತ್ತೂರಿನಿಂದ 256, ಚೆಮ್ನಾಡ್ ನಿಂದ 222, ಕಾಸರಗೋಡು ನಗರಸಭೆ 195, ತ್ರಿಕರಿಪುರ 67, ಉದುಮಾ 50, ಕಾಞಂಗಾಡ್ ನಗರಸಭೆ 46, ಪಳ್ಳಿಕ್ಕರೆ 45, ನೀಲೇಶ್ವರ ನಗರಸಭೆ 34, ಪಡನ್ನ 23, ಕುಂಬಳೆ 22 ಮಂದಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಅಹವಾಲು ಸ್ವೀಕಾರ ಸಭೆಯಲ್ಲಿ ಸಲ್ಲಿಸಲಾಗುವ ಮಾಹಿತಿಯ ಹಿನ್ನೆಲೆಯಲ್ಲಿ ನೂತನ ಪಟ್ಟಿ ಸಿದ್ಧಗೊಳಿಸಿ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಾಗುವುದು. ಇಲ್ಲಿ ಬಾಗವಹಿಸದೇ ಇದ್ದವರಿಗೆ ಇನ್ನೊಂದು ಅವಕಾಶವಿರದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ನಗರ ಯೋಜನಾಧಿಕಾರಿ ಪಿ.ರವಿಕುಮಾರ್, ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಹಣಕಾಸು ಅಧಿಕಾರಿ ಕೆ.ಸತೀಶನ್, ಪಂಚಾಯತ್ ಸಹಾಯಕ ಅಧಿಕಾರಿ ಅವರ ಪ್ರತಿನಿಧಿ ಕೆ.ವಿನೋದ್, ನಗರ-ಗ್ರಾಮ ಯೋಜನೆ ವಿಭಾಗ ಸಿಬ್ಬಂದಿ ಉಪಸ್ಥಿತರಿದ್ದರು.


