HEALTH TIPS

ಅನಂತಪದ್ಮನಾಭ ಉಪಾಧ್ಯಾಯ ಸಂಸ್ಮರಣೆ-ಸನ್ಮಾನ-ಹಿರಿಯರ ಧೀರ್ಘ ದೃಷ್ಟಿಯ ಚಿಂತನೆಯಿಂದ ಸಂಸ್ಕøತಿಯ ಸಂವರ್ಧನೆ ಬೆಳೆದಿದೆ-ಕುಂಟಾರು ರವೀಶ ತಂತ್ರಿ


        ಬದಿಯಡ್ಕ: ಧಾರ್ಮಿಕ, ಸಾಮಾಜಿಕ, ಸಂಪ್ರದಾಯ, ರಾಜಕೀಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಇಂದು ತನ್ನ ಕದಂಭ ಬಾಹುಗಳನ್ನು ಚಾಚಿರುವ ಸ್ವಾರ್ಥ ಲಾಲಸೆಯಿಂದ ಹೊರಬರಲು ಆಧ್ಯಾತ್ಮಿಕ-ಧಾರ್ಮಿಕ ಚಿಂತನೆಗಳ ಅರಿವು ಜಾಗೃತಿ ಮೂಡಿಸುವ ನಿರಂತರ ಕಾರ್ಯಯೋಜನೆಗಳು ಅನುಷ್ಠಾನಗೊಳ್ಳಬೇಕು. ದೈವಿಕ ಆಚರಣೆಗಳನ್ನು ಸ್ವಾರ್ಥಕ್ಕಾಗಿ ಬಳಸದೆ ಭಾರತದ ಪ್ರಾಚೀನ ದೃಷ್ಟಿಕೋನದಂತೆ ಲೋಕಹಿತಕ್ಕಾಗಿ ಬಳಸಿಕೊಂಡಾಗ ನೆಮ್ಮದಿಯ ರಾಷ್ಟ್ರ, ಸಮಾಜ, ಮನಸ್ಸುಗಳು ನಿರ್ಮಾಣಗೊಳ್ಳುವುದು. ಅಂತಹ ಸಾಧ್ಯತೆ ಇಂದು ಮೈದಳೆಯುವುದಾದರೆ ಯಕ್ಷಗಾನ ಕಲೆಯಿಂದ ಮಾತ್ರ ಸಾಧ್ಯ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರು ತಿಳಿಸಿದರು.
       ಶ್ರೀನಿಲಯ ಕೊಲ್ಲಂಗಾನದಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ತಂತ್ರವಿದ್ಯಾತಿಲಕ ತಂತ್ರಿ ದಿ. ಅನಂತಪದ್ಮನಾಭ ಉಪಾಧ್ಯಾಯರ 16ನೇ ಸಂಸ್ಮರಣಾ ಸಮಾರಂಭ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಸಮಾಜದಿಂದ ತನಗೇನು ದೊರಕಿತು ಎನ್ನುವುದಕ್ಕಿಂತ ತಾನೇನು ನೀಡಿದ್ದೇನೆ ಎಂಬ ಚಿಂತನೆ ನಮ್ಮಲ್ಲಿರಬೇಕು. ವ್ಯಾಪಾರೀಕರಣದ ಮನಸ್ಸಿನಿಂದ ಹೊರಬಂದರಷ್ಟೇ ಕ್ಲೇಶ ರಹಿತ ಬದುಕು ಸಾಧ್ಯವಾಗುವುದು. ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಕ್ಷಗಾನ ಕಲೆಯ ಕೊಡುಗೆ ಸಾದರದೋಪಾದಿಯಲ್ಲಿ ಮಹತ್ತರವಾದುದು ಎಂದರು. ದಿ.ಅನಂತಪದ್ಮನಾಭ ಉಪಾಧ್ಯಾಯ ಅವರ ಧೀರ್ಘ ದೃಷ್ಟಿಯ ಚಿಂತನೆಗಳು ಸಂಸ್ಕøತಿ ಪ್ರವರ್ಧನೆಗೆ ನೀಡಿದ ಕೊಡುಗೆಗಳಿಗೆ ಸಮಾಜ ಎಂದಿಗೂ ಅಭಾರಿಯಾಗಿರುತ್ತದೆ ಎಂದು ತಿಳಿಸಿದ ಅವರು, ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಯ ಬೆಳವಣಿಗೆಗೆ ಯಕ್ಷಗಾನ ಇಂದು ಮಹತ್ತರವಾದ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
       ನ್ಯಾಯವಾದಿ ಪೆರ್ವೊಡಿ ರಾಮಕೃಷ್ಣ ಭಟ್, ಸುಬ್ರಹ್ಮಣ್ಯದ ಶ್ರೀಸುಬ್ರಹ್ಮಣ್ಯ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಪಿ., ಉದ್ಯಮಿ ವೇಣುಗೋಪಾಲ ತತ್ವಮಸಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪುರಸ್ಕøತರಾದ ಯಕ್ಷಗಾನ ಭಾಗವತ, ಶಿಕ್ಷಕ ಸತೀಶ ಪುಣಿಚಿತ್ತಾಯ ಪೆರ್ಲ ಅವರನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಲಾಯಿತು. ಬಸವರತ್ನ ಪ್ರಶಸ್ತಿ ಪುರಸ್ಕøತ ರವಿ ಅಲೆವೂರಾಯ ವರ್ಕಾಡಿ ಅವರು ಅಭಿನಂದನಾ ಭಾಷಣಗೈದರು. ವೇದ ವಿದ್ವಾನ್ ಸುಬ್ರಹ್ಮಣ್ಯ ಮಯ್ಯ ವರ್ಕಾಡಿ, ದೈವ ನರ್ತನ ಕಲಾವಿದ ಉಣ್ಣಿ ಪಣಿಕ್ಕರ್ ಮಧೂರು ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಪಿ.ವಿ. ಅನಂತಪದ್ಮನಾಭ ಉಪಾಧ್ಯಾಯ ಬಗ್ಗೆ ಸಂಸ್ಮರಣಾ ಭಾಷಣಗೈದು ನುಡಿನಮನ ಸಲ್ಲಿಸಿದರು.
    ಸಮಾರಂಭದಲ್ಲಿ ಹಿರಿಯ ಭಕ್ತಿ ಕವಿ ಎಂ.ಪರಮೇಶ್ವರ ನಾಯ್ಕ ಅರ್ತಲೆ ಅವರು ಬರೆದಿರುವ ಕೊಲ್ಲಂಗಾನದ ಶ್ರೀನಿಲಯಾಮೃತ ಭಕ್ತಿಗೀತೆಗಳ ಪುಸ್ತಕವನ್ನು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರು ಬಿಡುಗಡೆಗೊಳಿಸಿದರು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ಶ್ರೀದೀಕ್ಷಾ  ಕೊಲ್ಲಂಗಾನ ವಂದಿಸಿದರು.  ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
    ಬಳಿಕ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ತಂಡದವರಿಂದ  ಭಕ್ತಿಗೀತೆಗಳ ಶಾಸ್ತ್ರೀಯ ಗಾಯನ ನಡೆಯಿತು. ಪ್ರಭಾಕರ ಕುಂಜಾರು(ವಯೋಲಿನ್), ಶ್ರೀಧರ ಭಟ್ ಬಡಕೇಕೆರೆ (ಮೃದಂಗ)ದಲಲಿ ಸಹಕರಿಸಿದರು. ಆ ಬಳಿಕ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಕೊಲ್ಲಂಗಾನ ಅವರಿಂದ ಶ್ರೀಕೃಷ್ಣ ಲೀಲೆ-ಕಂಸವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries