ಕುಂಬಳೆ: ಯಕ್ಷಗಾನ ಕಲಾಕ್ಷೇತ್ರದ ಸಮಗ್ರ ದಿಕ್ಕನ್ನೇ ವಿಶಿಷ್ಟ ಮನ್ವಂತರದತ್ತ ಕೊಂಡೊಯ್ಯುವಲ್ಲಿ ಯುವ ಭಾಗವತ ಪಟ್ಲ ಸತೀಶ ಶೆಟ್ಟಿ ಅವರು ಧ್ರುವತಾರೆಯಾಗಿ ಮಿಂಚುವವರಾಗಿ ಗರಿಮೆ ಮೂಡಿಸಿದ್ದಾರೆ. ಹೊಸ ತಲೆಮಾರಿಗೆ ಯಕ್ಷಗಾನದ ಆಸಕ್ತಿ ಮೂಡಿಸುವುದರ ಜೊತೆಗೆ ಅಶಕ್ತ ಕಲಾವಿದರ ಸರ್ವತೋಮುಖ ಶ್ರೇಯಕ್ಕೆ ಪಟ್ಲರ ಪ್ರಯತ್ನಗಳು ಶ್ಲಾಘನೀಯವಾಗಿ ಅನುಸರಣೀಯ ಎಂದು ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಾಧವ ಅಡಿಗ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಶನಿವಾರ ನಡೆದ ಆರಾಟ ಮಹೋತ್ಸವದ ಪ್ರಯುಕ್ತ ಯಕ್ಷಧ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ನೇತೃತ್ವದಲ್ಲಿ ಪಟ್ಲ ಸಂಭ್ರಮ ಕುಂಬಳೆ 4ನೇ ವರ್ಷದ ಸಮಾರಂಭವನ್ನು ಶ್ರೀಕ್ಷೇತ್ರ ಪರಿಸರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರು ಮಾತನಾಡಿ, ಕಲಾವಿದರ ನೆರಳಲ್ಲಿ ನೆರವಿಗಾಗಿ ಹುಟ್ಟಿಕೊಂಡ ಪಟ್ಲ ಫೌಂಡೇಶನ್ ಐದು ವರ್ಷಗಳ ಅವಧಿಯಲ್ಲಿ ಸಾಗಿಬಂದ ಹೆಜ್ಜೆಗಳು ದಾಖಲೆಯ ಸೇವಾ ತತ್ಪರತೆಯ ಮೂಲಕ ಅತ್ಯಪೂರ್ವ ಸಂಘಟನೆಯಾಗಿ ಮೂಡಿಬಂದಿದೆ. ರಾಷ್ಟ್ರ-ಹೊರರಾಷ್ಟ್ರಗಳಲ್ಲಾಗಿ 35 ಘಟಕಗಳನ್ನು ಹೊಂದಿದ್ದು ಇನ್ನಷ್ಟು ಘಟಕಗಳ ರೂಪೀಕರಣಕ್ಕೆ ಬೇಡಿಕೆಗಳು ಬರುತ್ತಿರುವುದು ಸಂಸ್ಥೆಯ ಗರಿಮೆಯ ಸಂಕೇತವಾಗಿದೆ ಎಂದು ತಿಳಿಸಿದರು. ಕಿನ್ನಿಗೋಳಿಯಲಲಿ ಫೌಂಡೇಶನ್ ನ ಬಹುನಿರೀಕ್ಷಿತ ಅಶಕ್ತ ಕಲಾವಿದರಿಗಿರುವ 100 ಮನೆಗಳ ವಸತಿ ಸಂಕೀರ್ಣ ನಿರ್ಮಾಣದ ಕನಸು ಶೀಘ್ರ ಸಾಕಾರಗೊಳ್ಳಲಿದ್ದು, ಕಳೆದ ಐದು ವರ್ಷಗಳಲ್ಲಿ ಸಂಸ್ಥೆ 5.5 ಕೋಟಿ ರೂಗಳ ಬೃಹತ್ ನೆರವನ್ನು ಕಲಾವಿದರಿಗೆ ನೀಡುವ ಮೂಲಕ ಸಾರ್ಥಕ್ಯತೆಯನ್ನು ಹೊಂದಿದೆ. ಸಹೃದಯ ಕಲಾವಿದರು, ಕಲಾಪೋಷಕರಿಂದ ಕಟ್ಟಲ್ಪಟ್ಟ ಫೌಂಡೇಶನ್ ಇನ್ನಷ್ಟು ಪ್ರಗತಿಯನ್ನು ಸಾಕಾರಗೊಳಿಸಲು ಉತ್ಸುಕವಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಪಟ್ಲ ಪೌಂಡೇಶನ್ ಕುಂಬಳೆ ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕುಂಬಳೆ ಗ್ರಾ.ಪಂ.ಸದಸ್ಯರಾದ ಮುರಳೀಧರ ಯಾದವ್ ನಾಯ್ಕಾಪು, ಪುಷ್ಪಲತಾ, ಪಟ್ಲ ಫಡೇಶನ್ ಮೂಡಬಿದ್ರೆ ಘಟಕದ ಅಧ್ಯಕ್ಷ ಪ್ರೇಮನಾಥ ಮಾರ್ಲ ಉಪಸ್ಥಿತರಿದ್ದು ಶುಭ ಹಾರೈಸಿದರು. ಕುಂಬಳೆ ಘಟಕದ ಕೋಶಾಧಿಕಾರಿ ಸುಕೇಶ್ ಭಂಡಾರಿ, ಗೌರವಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಲೋಕನಾಥ ಶೆಟ್ಟಿ, ನರಹರಿ ಮಾಸ್ತರ್ ಕಳತ್ತೂರು, ರಾಘವೇಂದ್ರ ನಾಯಕ್ ಬದಿಯಡ್ಕ, ಮಂಜುನಾಥ ಆಳ್ವ ಮಡ್ವ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿರಿಯ ಕಲಾವಿದ ಕೂಡ್ಲು ಆನಂದ ಅವರಿಗೆ ವಿಶೇಷ ಸನ್ಮಾನಗಳನ್ನಿತ್ತು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಯಕ್ಷಗಾನದ ಸಂಘಟಕರಾಗಿ ಚಿರಪರಿಚಿತರಾಗಿದ್ದ ಹವ್ಯಾಸಿ ಭಾಗವತ ದಿ.ವೈ.ಡಿ.ನಾಯಕ್ ಅವರ ಸಂಸ್ಮರಣೆ ನಡೆಸಲಾಯಿತು. ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಸಂಸ್ಮರಣಾ ಭಾಷಣಗೈದು ತಮ್ಮ ಸುದೀರ್ಘ ಅವಧಿಯ ಒಡನಾಟಗಳ ನೆನಪನ್ನು ಬಿಚ್ಚಿಟ್ಟರು. ಘಟಕದ ಉಪಾಧ್ಯಕ್ಷ ಪುತ್ತಿಗೆ ವೇಣುಗೋಪಾಲ ಶೆಟ್ಟಿ ಕಿನ್ನಿಮಜಲು ಸ್ವಾಗತಿಸಿ, ಘಟಕದ ಖಜಾಂಜಿ ಮಧೂರು ರಾಧಾಕೃಷ್ಣ ನಾವಡ ವಂದಿಸಿದರು. ಜೊತೆ ಕಾರ್ಯದರ್ಶಿ ಅವಿನಾಶ ಕಾರಂತ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷ ಗಾನ ವೈಭವ ನಡೆಯಿತು. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ, ಬಲಿಪ ಪ್ರಸಾದ ಭಟ್, ಡಾ.ಪ್ರಖ್ಯಾತ್ ಶೆಟ್ಟಿ ಅಳಿಕೆ ಭಾಗವತಿಕೆಯಲ್ಲಿ, ಲವ ಕುಮಾರ ಐಲ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮುರಾರಿ ಭಟ್ ಚೆಂಡೆ, ಮದ್ದಳೆ, ಚಕ್ರತಾಳದಲ್ಲಿ ಸಹಕರಿಸಿದರು. ಮಾಧವ ಡಿ.ಬಂಗೇರ ಕೊಳ್ತಮಜಲು ನಿರೂಪಿಸಿದರು. ಪಾಂಡವಾಸ್ ಕಂಚಿಕಟ್ಟೆ ಕ್ಲಬ್ ಸದಸ್ಯರು ಸಹಕರಿಸಿದರು.



