ಕಾಸರಗೋಡು: ಅದಾಲತ್ ಮೂಲಕ ವಿದ್ಯುನ್ಮಮಂಡಳಿ ಮತ್ತು ಸಾರ್ವಜನಿಕರ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ರಾಜ್ಯ ಸರಕಾರ ಯತ್ನಿಸಿದೆ ಎಂದು ವಿದ್ಯುತ್ ಸಚಿವ ಎಂ.ಎಂ.ಮಣಿ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿದ್ಯುತ್ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪೂರ್ಣ ವಿದ್ಯುದೀಕರಣ ವಲ್ಲದೆ ಪವರ್ ಕಟ್, ಲೋಡ್ ಶೆಡ್ಡಿಂಗ್ ನಡೆಸುವಿದಿಲ್ಲ ಎಂಬ ಆಶ್ವಾಸನೆಯೊಂದಿಗೆ ಅಧಿಕಾರಕ್ಕೇರಿದ ರಾಜ್ಯ ಸರಕಾರ ತನ್ನ ವಚನ ಪಾಲಿಸಿದೆ ಮತ್ತು ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಹೆಚ್ಚುವರಿ ಯೋಜನೆಗಳೊಂದಿಗೆ ಮುನ್ನಡೆ ಸಾಧಿಸುತ್ತಿದೆ ಎಂದು ಹೇಳಿದರು.
ವಿದ್ಯುತ್ ವಲಯದಲ್ಲಿ ದಕ್ಷತೆಯ ಚಟುವಟಿಕೆಗಳನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಸಂದಾನಕ್ಕೆ ಸಿದ್ಧವಿಲ್ಲದ ವಿದ್ಯುನ್ಮಂಡಳಿ ಸಿಬ್ಬಂದಿ ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ ನೂತನ ಯೋಜನೆಗಳನ್ನು ವಹಿಸಿ ಜಾರಿಗೊಳಿಸುತ್ತಿದೆ. ಪ್ರಕೃತಿ ದುರಂತ, ಓಖಿ, ನೆರೆಹಾವಳಿಯಿಂದ ಅಪಾರ ನಷ್ಟ ಅನುಭವಿಸಿದ ವಿದ್ಯುನ್ಮಂಡಳಿ ಸೂಕ್ತ ಸಮಯದಲ್ಲೇ ಪುನಶ್ಚೇತನವನ್ನೂ ಕಂಡುಕೊಂಡಿದೆ. ನೆರೆ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಪರಿಣತ ಸೇವೆ ಒದಗಿಸಲು ಸಾಧ್ಯವಾಗಿದೆ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ನ ಶೇ 30 ಮಾತ್ರ ಇಲ್ಲಿ ಉತ್ಪಾದನೆಯಾಗುತ್ತಿದೆ. ಉಳಿದ ಶೇ 70 ಇತರ ರಾಜ್ಯಗಳಿಂದ ಕಿರು ಮತ್ತು ದೀರ್ಘ ಅವಧಿಯ ಕರಾರಗಳ ಮೂಲಕ ಪಡೆಯಲಾಗುತ್ತಿದೆ. ಈ ಮಿತಿಗಳ ನಡುವೆಯೂ ಸಂಪೂರ್ಣ ವಿದ್ಯುದೀಕರಣ ಯೋಜನೆಯೊಂದಿಗೆ ಮುನ್ನಡೆ ಸಾಧಿಸಲಾಗುತ್ತಿದೆ ಎಂದರು.
ಪ್ರತಿದಿನ ವಿದ್ಯುತ್ ಬಳಕೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ತಲೆದೋರಬಹುದಾದ ವಿದ್ಯುತ್ ಕೊರತೆಯನ್ನು ಮುಂಗಡವಾಗಿ ಮನಗಂಡು ಅದರ ಪರಿಹಾರಕ್ಕೆ ಈಗಲೇ ಯತ್ನ ನಡೆಸಲಾಗುತ್ತಿದೆ. ಸೌರಶಕ್ತಿಯ ಬಳಕೆ ಸಹಿತ ಅನೇಕ ಪ್ರಯೋಗಗಳನ್ನು ಈ ನಿಟ್ಟಿನಲ್ಲಿ ನಡೆಸಲಾಗುತ್ತಿದೆ. 200 ಮೆಗಾವ್ಯಾಟ್ ಈಗ ಉತ್ಪಾದನೆಯಾಗುತ್ತಿದೆ. ಒಂದು ಸಾವಿರಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉತ್ಪಾದಿಸುವ ಯೋಜನೆ ಜಾರಿಯಲ್ಲಿದೆ. ವಿದ್ಯುನ್ಮಂಡಳಿಯ ದಕ್ಷತೆಯ ಜೊತೆಗೆ ಸಾರ್ವಜನಿಕರಿಗೆ ಸಂತೃಪ್ತಿ ನೀಡುವ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂಥಾ ಅದಾಲತ್ ಗಳನ್ನು ನಡೆಸಲಾಗುತ್ತಿದೆ ಎಂದು ಸಚಿವ ಹೇಳಿದರು.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞ ರಾಮನ್, ಎಂ.ಸಿ.ಕಮರುದ್ದೀನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ವಿವಿಧ ನಗರಸಭೆ ಅಧ್ಯಕ್ಷರಾದ ಬಿಫಾತಿಮಾ ಇಬ್ರಾಹಿಂ, ಪೆÇ್ರ.ಕೆ.ಪಿ.ಜಯರಾಜನ್, ಕೆ.ಎಸ್.ಇ.ಬಿ. ನಿರ್ದೇಶಕ ಡಾ.ವಿ.ಶಿವದಾಸನ್, ವಿತರಣೆ ನಿರ್ದೇಶಕ ಪಿ.ಕುಮಾರನ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಸ್.ಇ.ಬಿ. ಅಧ್ಯಕ್ಷ ಎಲ್.ಎಸ್.ಪಿಳ್ಳೆ ಸ್ವಾಗತಿಸಿದರು. ನೋರ್ತ್ ಮಲಬಾರ್ ವಿತರಣೆ ಮುಖ್ಯ ಇಂಜಿನಿಯರ್ ಆರ್.ರಾಧಾಕೃಷ್ಣನ್ ವಂದಿಸಿದರು.


