HEALTH TIPS

ಭೂಮಿಯ ಸಮೃದ್ಧಿಗೆ ಕಾಡು, ಬನಗಳ ರಕ್ಷಣೆ ಆಗಬೇಕು : ಗಂಗಾಧರ ರೈ-ಮಾರ್ಪನಡ್ಕ ಚೌಕಾರು ಗುಳಿಗ ಬನದ ನಾಲ್ಕನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

   
        ಬದಿಯಡ್ಕ: ಪುರುಷಾರ್ಥ ಚತುಷ್ಟಯಗಳನ್ನು ಧರ್ಮಮಾರ್ಗದಿಂದ ಸಾಧಿಸಿಕೊಂಡು ಮನುಷ್ಯ ತನ್ನ ಜನ್ಮದಲ್ಲಿ ಉನ್ನತಿಗೇರಬೇಕಾಗಿದೆ. ಪೂರ್ವಜನ್ಮದ ಸುಕೃತ ಫಲದಿಂದ ನಾವೆಲ್ಲ ಮುನುಷ್ಯರಾಗಿ ಜನಿಸಿದ್ದೇವೆ. ಈ ಜನ್ಮದ ಮಹತ್ವವನ್ನರಿತು ನಾವು ಪರೋಪಕಾರಿಗಳಾಗಿ ಬದುಕಬೇಕಾಗಿದೆ. ಊರಿನಲ್ಲಿರುವ ದೈವ ವನಗಳು, ನಾಗಬನಗಳು ನಿಜವಾಗಿಯೂ ಪ್ರಕೃತಿಯನ್ನು ಆರಾಧಿಸುವ ಮಾರ್ಗ. ಆಧುನಿಕತೆಯ ಹೆಸರಿನಲ್ಲಿ ಬನಗಳನ್ನು ನಾಶ ಮಾಡದೇ ಉಳಿಸಿಕೊಂಡಾಗ ಮಾತ್ರ ಭೂಮಿಯಲ್ಲಿ ಸಮೃದ್ಧಿ ಉಂಟಾಗಲು ಸಾಧ್ಯ ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಗಂಗಾಧರ ರೈ ಮಠದಮೂಲೆ ಧಾರ್ಮಿಕ ಉಪನ್ಯಾಸದಲ್ಲಿ ಹೇಳಿದರು.
       ಕುಂಬ್ಡಾಜೆ ಮಾರ್ಪನಡ್ಕ ಚೌಕಾರು ಗುಳಿಗ ಬನದ ನಾಲ್ಕನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಭೂತಾರಾಧನೆಯು ತೌಳವ ನಾಡಿನ ಸಂಸ್ಕøತಿಯ ಅವಿಭಾಜ್ಯ ಅಂಗ. ದೇವರ ವಿವಿಧ ಅವತಾರಗಳನ್ನು ದೈವ ರೂಪದಲ್ಲಿ ಆರಾಧಿಸುವ ಜತೆಗೆ ಪೂರ್ವಕಾಲದಲ್ಲಿ ನಾಡಿನ ಒಳಿತಿಗಾಗಿ ಶ್ರಮಿಸಿದ ದೇವ ಸಂಭೂತರೆನಿಸಿಕೊಂಡ ವ್ಯಕ್ತಿಗಳನ್ನು ಅವರ ಕಾಲನಂತರದಲ್ಲಿ ದೈವಗಳಾಗಿ ಆರಾಧಿಸಿಕೊಂಡಿರಬಹುದೆಂದು ಅನಿಸುತ್ತಿದೆ. ದೈವ ಪಾತ್ರಧಾರಿಗೆ ಆವೇಶಕೊಡುವ ಸಂಧಿಯನ್ನು ಹೇಳುವುದು ಬಹಳ ಮಹತ್ವದ ಭಾಗವಾಗಿದೆ. ಇದು ವೇದ ಮಂತ್ರ ಉಚ್ಛರಣೆಗಳಿಂದ ನಗಣ್ಯವಲ್ಲವೆಂದೇ ಹೇಳಬಹುದು ಮುಕ್ತ ಆರಾಧನಾ ಸ್ವಾತಂತ್ರ್ಯವನ್ನು ನೀಡಿರುವ ಹಿಂದೂ ಧರ್ಮವು ಬಹಳ ಸ್ಥಿತಿ ಸ್ಥಾಪಕ ಗುಣವಿರುವಂತದ್ದು. ಯಾವ ಜಾತಿ, ಮತವನ್ನು ಬೇಕಾದರೂ ತನ್ನಲ್ಲಿ ಹುದುಗಿಸಿಕೊಳ್ಳಲು ಸಮರ್ಥವಾದದು. ಈ ಆರಾಧನಾ ಸ್ವಾತ್ರಂತ್ರ್ಯವನ್ನು ನೀಡಿರುವ ಜಗತ್ತಿನ ಏಕೈಕ ಧರ್ಮ ಹಿಂದೂ ಧರ್ಮವಾಗಿದೆ. ಇದೊಂದು ಜಾತಿಯೋ ಮತವೋ ಆಗಿರದೇ ಭಾರತಿಯರ ಜೀವನ ಪದ್ಧತಿಯಾಗಿದೆ. ಇಂದಿನ ಮಕ್ಕಳು ಆಧ್ಯಾತ್ಮಿಕತೆ ಹಾಗೂ ಸಂಸ್ಕøತಿಯಿಂದ ದೂರವಾಗದಂತೆ ಸಂರಕ್ಷಿಸುವುದಕ್ಕಾಗಿ ನಮ್ಮ ಪ್ರತಿ ಮನೆಯಲ್ಲೂ ಭಜನೆ, ಸಂದ್ಯಾದೀಪ, ಹಿರಿಯರನ್ನು ಗೌರವಿಸುವ ರೀತಿಯನ್ನು ಆಚರಿಸಿ ಮಕ್ಕಳಿಗೆ ಅನುಕರಣೀಯ ರೀತಿಯಲ್ಲಿ ನಾವು ಬದುಕಿದಾಗ ಮಾತ್ರ ಇತರರ ಸುಖವೇ ತನ್ನ ಸುಖವೆಂಬ ಧ್ಯೇಯದೆಡೆಗೆ ನಾವು ಸಾಗಬಹುದು ಎಂದು ಅವರು ತಿಳಿಸಿದರು.
       ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ತಲೇಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂಬ್ಡಾಜೆ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಆನಂದ ಕೆ.ಮವ್ವಾರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಶ್ರಾಂತ ಅಂಗನವಾಡಿ ಸಹಾಯಕಿ ಸರಸ್ವತಿ ಕಾನಕ್ಕೋಡು ಹಾಗೂ ಜಾನಕಿ ಮಾರ್ಪನಡ್ಕ ಅವರನ್ನು ಸನ್ಮಾನಿಸಲಾಯಿತು. ಗುಳಿಗಬನ ಸೇವಾಸಮಿತಿಯ ಗೌರವ ಸಲಹೆಗಾರರಾದ ಬಾಬು ಮಾಸ್ತರ್ ಅಗಲ್ಪಾಡಿ ಸನ್ಮಾನಿತರ ಪರಿಚಯವನ್ನು ಮಾಡಿದರು. ಗುಳಿಗಬನ ಸೇವಾಸಮಿತಿಯ ಅಧ್ಯಕ್ಷ ಮಣಿಕಂಠನ್ ಉಪಸ್ಥಿತರಿದ್ದರು. ಸೇವಾಸಮಿತಿಯ ಗೌರವ ಸಲಹೆಗಾರರಾದ ರಾಮಚಂದ್ರ ಭಟ್ಟ ಉಪ್ಪಂಗಳ ಸ್ವಾಗತಿಸಿ, ಕಾರ್ಯದರ್ಶಿ ಕಮಲ ಮಾರ್ಪನಡ್ಕ ವಂದಿಸಿದರು. ಉತ್ಸವ ಸಮಿತಿಯ ಪ್ರಧಾನ ಸಂಚಾಲಕ ಶ್ರೀಧರ ಪದ್ಮಾರ್ ನಿರೂಪಿಸಿದರು.
      ಬ್ರಹ್ಮಶ್ರೀ ಡಾ. ಮಾಧವ ಉಪಾಧ್ಯಾಯ ಬಳ್ಳಪದವು ಅವರ ನೇತೃತ್ವದಲ್ಲಿ ಗಣಪತಿ ಹೋಮ, ಶುದ್ಧಿಕಲಶ, ತಂಬಿಲ ಜರಗಿತು. ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಸಂಘದವರು ಭಜನೆ ನಡೆಸಿಕೊಟ್ಟರು. ಅಪರಾಹ್ನ ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries