ಕುಂಬಳೆ: ಭವಿಷ್ಯದ ಬಗ್ಗೆ ನಿರೀಕ್ಷೆಗಳು ಮತ್ತು ಖರ್ಚುವೆಚ್ಚಗಳ ಬಗ್ಗೆ ಜಾಗರೂಕತೆ ನೆಮ್ಮದಿಯ ಬದುಕಿನ ಶ್ರೀರಕ್ಷೆಯಾಗಿದೆ. ಸಂಸಾರ ರಥದ ಸುಲಲಿತ ಸಂಚಾರಕ್ಕೆ ಪತಿ-ಪತ್ನಿಯರಿಬ್ಬರ ಕೊಡುಗೆಗಳೂ ಇಂದು ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಮೈಕ್ರೋ ಪೈನಾನ್ಸ್ ಗಳೆಂದು ಕರೆಯಲ್ಪಡುವ ಸ್ವಸಹಾಯ ಸಂಘಗಳು ಇಂದಿನ ಸಮಾಜ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ಶ್ರೀಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಾಯ್ಕಾಪು ಸಮೀಪದ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರ ಪರಿಸರದಲ್ಲಿ ಶನಿವಾರ ಆಯೋಜಿಸಲಾಗಿದ್ದ 2701ನೇ ಸ್ವ ಸಹಾಯ ಸಂಘದ ಉದ್ಘಾಟನೆ ನೆರವೇರಿಸಿ, ನವಜೀವನ ಸಮಿತಿ ಸದಸ್ಯರ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಯೋಜನೆಯ ಮೂಲಕ ಬಹುಮುಖಿ ಯೋಜನೆಗಳು ಇಂದು ಎಲ್ಲಡೆ ಜನಜೀವನದ ದಿಕ್ಕನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. ಭವಿಷ್ಯದ ಕಲ್ಪನೆಯೊಂದಿಗೆ ಪ್ರಗತಿ, ಸೇವೆಗಳ ಚಿಂತನೆಯೊಂದಿಗೆ ಇತರೆಡೆಗಳಂತೆ ಕಾಸರಗೋಡು ಜಿಲ್ಲೆಯಲ್ಲೂ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ತಿಳಿಸಿದರು. ವಿಶಾಲ ಪಾರಂಪರಿಕ ಹಿನ್ನೆಲೆ ಕೇರಳದ ಮೂಲ ಸ್ವರೂಪ ಸ್ತ್ರೀಶಕ್ತಿಯ ತತ್ವದಡಿ ಪ್ರಾಚೀನ ಕಾಲದಿಂದಲೂ ವಿಭಿನ್ನವಾಗಿ ಗಮನ ಸೆಳೆದಿದೆ. ಜೊತೆಗೆ ಆಧುನಿಕ ವ್ಯವಸ್ಥೆಗಳನ್ನೂ ಸಮರ್ಥವಾಗಿ ಬಳಸಿ ಅಭಿವೃದ್ದಿಯ ಪಥದಲ್ಲಿ ಮುಂದುವರಿಯಬೇಕು ಎoದರು.
ಪ್ರಗತಿ ರಕ್ಷಾ ಕವನ ಎಂಬ ಹೊಸ ಯೋಜನೆಯ ಮೂಲಕ 564 ಕುಟುಂಬಗಳು 4 ಕೋಟಿ 47 ಲಕ್ಷ ರೂ. ವಿಮಾ ಕಂಪೆನಿಗಳ ಮೂಲಕ ನೆರವಿನ ಹಸ್ತಾಂತರವಾಗಿದೆ. ಈ ಕಾರಣದಿಂದ ತುರ್ತು ನೆರವು ಲಭ್ಯವಾಗಿರುವುದು ಯೋಜನೆಯ ಹೆಗ್ಗುರುತಾಗಿದೆ. 28 ಕೋಟಿ ರೂಗಳ ಜೀವವಿಮಾ ಯೋಜನೆಯೂ ಜಾರಿಯಲ್ಲಿದೆ. ಈ ರೀತಿಯ ಹಲವು ಆರ್ಥಿಕ ನೆರವುಗಳು ಯೋಜನೆಯ ಮೂಲಕ ಸಮಾಜಕ್ಕೆ ಲಭ್ಯವಾಗುತ್ತಿದೆ. ಆದರೆ ಲಭ್ಯ ಅವಕಾಶವನ್ನು ಸಮರ್ಥವಾಗಿ ಬಳಸುವ ಅರ್ಹತೆ, ಜವಾಬ್ದಾರಿಯೂ ಸದಸ್ಯರಲ್ಲಿರಬೇಕು. ಅದಿಲ್ಲದಿದ್ದರೆ ಬಂಗಾರದಚ ಪಾತ್ರೆಯ ತೂತಿನಂತೆ ವ್ಯರ್ಥವಾಗುವ ಗಂಭೀರತೆಯನ್ನೂ ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಯೋಜನೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮದ್ಯವರ್ಜನ ಶಿಬಿರಗಳು ಸಮಾಜದ ಸಾವಿರಾರು ಕುಟುಂಬಗಳ ಕಣ್ಣೀರೊರೆಸುವಲ್ಲಿ ಸಾಫಲ್ಯ ಕಂಡಿದೆ. ಜನಜೀವನ ಸಮಿತಿಗಳ ನಿರಂತರ ಶ್ರಮದಿಂದ ಚಟಗಳಿಂದ ಹೊರಬಂದವರು ಸುಂದರ ಬದುಕನ್ನು ಕಾಣುವಂತಾಗಿದೆ. ಇಂತಹ ಅಭಿವೃದ್ದಿಯ ಹೆಜ್ಜೆಗಳ ನಾಗಾಲೋಟದಲ್ಲಿ ಪ್ರತಿಯೊಬ್ಬನ ಪಾಲ್ಗೊಳ್ಳುವಿಕೆ ಯಶಸ್ಸಿನ ಮೆಟ್ಟಿಲನ್ನು ಸುಗಮಗೊಳಿಸುತ್ತದೆ. ಸಮಾಜ ಅಂತಹ ಮೆಟ್ಟಿಲುಗಳಾಗಿ ಜನರನ್ನು ಸುಭಿಕ್ಷದತ್ತ ಮುನ್ನಡೆಸಲಿ ಎಂದು ಖಾವಂದರು ಕರೆನೀಡಿದರು.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಸಿ.ಖಮರುದ್ದೀನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು, ರಾಷ್ಟ್ರ ನಿರ್ಮಾಣದ ಮೂಲ ವ್ಯಕ್ತಿ ನಿರ್ಮಾಣವಾಗಿದೆ. ವ್ಯಕ್ತಿ ನಿರ್ಮಾಣದಲ್ಲಿ ಇಮದು ಶ್ರೀಕ್ಷೇತ್ರ ಧರ್ಮಸ್ಥಳ ಸ್ವಚ್ಚ ಪರ್ಯಾಯ ಸರ್ಕಾರವಾಗಿ ಗಮನ ಸೆಳೆದಿದೆ ಎಮದರು. ವ್ಯಕ್ತಿ-ಗ್ರಾಮಗಳ ಅಭಿವೃದ್ದಿಯ ಜೊತೆಗೆ ಮನಸ್ಸುಗಳನ್ನು ಜೋಡಿಸುವ ಕೆಲಸಗಳನ್ನೂ ಶ್ರೀಕ್ಷೇತ್ರದ ಮೂಲಕ ಕೊಡುಗೆಯಾಗಿ ನೀಡಲ್ಪಡುತ್ತಿದೆ. ಕಾನೂನಿನ ಕಣ್ಣಿಗೂ ಕಾಣದ ಶಕ್ತಿ ಧಾರ್ಮಿಕ ಶಕ್ತಿಯಲ್ಲಿ ಅಡಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನಗೈದು, ಬದುಕಿನ ಆಚಾರ-ವಿಚಾರದ ಪರಂಪರೆಯನ್ನು ಉಳಿಸುವ ಮೂಲಕ ನೆಮ್ಮದಿಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು. ಸಮಾಜದಲ್ಲಿ ಮದ್ಯ ವಿಮುಕ್ತಿಗಿಂತ ದೊಡ್ಡ ಪುಣ್ಯ ಬೇರೊಂದಿಲ್ಲ. ಇಂತಹ ಸಾಧನೆಗಳ ದಾರಿದೀಪವಾದ ಶ್ರೀಕ್ಷೇತ್ರ ಧರ್ಮಸ್ಥಳದ ಅಪೂರ್ವ ಸೇವಾ ಕೈಂಕರ್ಯಕ್ಕೆ ರಾಷ್ಟ್ರ, ಸಮಾಜ ಎಮದಿಗೂ ಋಣಿಯಾಗಿರಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ 2701 ನೇ ಸ್ವಸಹಾಯ ಸಂಘವಾಗಿ ಘೋಶಿಸಲ್ಪಟ್ಟ ಚಂದ್ರಗಿರಿ ವಲಯದ ಅಡ್ಕತ್ತಬೈಲಿನ ಜಗದಂಬಾ ಸ್ವಸಸಹಾಯ ಸಂಘಕ್ಕೆ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ದಾಖಲಾತಿ ವಿತರಿಸಿ ಶುಭಹಾರೈಸಿದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಸಿಂಡಿಕೇಟ್ ಬ್ಯಾಂಕ್ ನ ಪ್ರಾದೇಶಿಕ ನಿರ್ದೇಶಕ ರಿಜಿ ಆರ್.ಆರ್. ಉಪಸ್ಥಿತರಿದ್ದು ಮಾಸಾಶನ ವಿತರಣೆ, ನವಜೀವನ ಸಮಿತಿ ಸದಸ್ಯರಿಗೆ ಪ್ರಶಸ್ತಿ ಪತ್ರ ವಿತರಣೆ, ಸುಜ್ಞಾನ ನಿಧಿ, ಕೃಷಿ ಅನುದಾನ, ಮೈಕ್ರೋ ಬಚಾತ್ ಬಾಂಡ್ ವಿತರಿಸಿದರು. ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ಅರುಣಾ ಜೆ., ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಸೀಮೆಯ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿ, ಉದಯ ಗಟ್ಟಿ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಭಾಗ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟರಮಣ ಹೊಳ್ಳ, ಗೌರವ ಸಲಹೆಗಾರ ಗೋಪಾಲ ಶೆಟ್ಟಿ ಅರಿಬೈಲು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಡಂಬಾರ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಸತೀಶ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ.ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೀಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ವಸಹಾಯ ಸಂಘ ಹಾಗೂ ನವಜೀವನ ಸಮಿತಿ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಸಮಾರಂಭದಲ್ಲಿ ಜಿಲ್ಲೆಯ ಎರಡು ಸಾವಿರಕ್ಕಿಂತಲೂ ಮಿಕ್ಕಿದ ಸ್ವಸಹಾಯ ಸಂಘಗಳು, ಜನವೀವನ ಸಮಿತಿ ಸದಸ್ಯರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.




