ಉಪ್ಪಳ: ಪೌರತ್ವ ಕಾಯ್ದೆ ವಿಚಾರದಲಿ ಮುಸ್ಲಿಂ ಸಮುದಾಯಗಳ ಮಧ್ಯೆ ತಪ್ಪು ಮಾಹಿತಿ ನೀಡಿ ಕೇರಳದ ಎಡರಂಗ ಸರ್ಕಾರ ಹಾಗೂ ಇಲ್ಲಿನ ಮುಸ್ಲಿಂ ಲೀಗ್, ಕಾಂಗ್ರೆಸ್ ಮುಸ್ಲಿಂ ವಿಭಾಗದ ಮತ ಬೇಟೆಗೆ ಸಂಚು ಮಾಡುತ್ತಿದೆ. ರಾಷ್ಟ್ರಪತಿಗಳ ಅಂಕಿತವಾದ ಕಾನೂನನ್ನು ವಿರೋಧಿಸಿ ಕೇರಳದಲ್ಲಿ ಮಾಡುತ್ತಿರುವ ಪ್ರತಿಭಟನೆಗಳೆಲ್ಲ ರಸ್ತೆ ಬದಿಯ ಡೊಂಬರಾಟ ಮಾತ್ರ ಎಂದು ಬಿಜೆಪಿ ಕೇರಳ ರಾಜ್ಯ ಐಟಿ ಸೆಲ್ ಮುಖ್ಯಸ್ಥ ಟಿ. ಪಿ. ರಂಜಿತ್ ಹೇಳಿದರು .
ಉಪ್ಪಳ ಪೇಟೆಯಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಗಳವಾರ ಜರಗಿದ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ..ಶ್ರೀಕಾಂತ್, ಮುಖಂಡರಾದ ರವೀಶ ತಂತ್ರಿ ಕುಂಟಾರು, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ಎ.ಕೆ. ಕಯ್ಯರ್, ಸರೋಜಾ ಆರ್.ಬಲ್ಲಾಳ್, ಪುಷ್ಪ ಅಮೆಕ್ಕಳ, ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.
ಮುರಳೀಧರ ಯಾದವ್ ಸ್ವಾಗತಿಸಿ, ದಿನೇಶ್ ಚೆರುಗೊಳಿ ವಂದಿಸಿದರು. ಆದರ್ಶ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು.


