ಕಾಸರಗೋಡು: ಎಂಡೋಸಲ್ಫಾನ್ ಎಂಬ ಮಾರಕ ಕೀಟನಾಶಕ ತಂದ ಜೀವ ಹಿಂಡುವ ನೋವಿಗೆ ಸಾಂತ್ವನದ ಲೇಪನ ನೀಡುವ ನಿಟ್ಟಿನಲ್ಲಿ, ಸಂತ್ರಸ್ತರ ಬದುಕಿಗೆ ಹೊಸುತ್ಸಾಹದ ಚೈತನ್ಯ ಒದಗಿಸುವ ಉದ್ದೇಶದಿಂದ ರಾಜ್ಯ ಸರಕಾರ ಕೈತುಂಬ ಜನಪರ ಕೊಡುಗೆ ನೀಡುತ್ತಿದೆ.
ಬದುಕಿನ ಬವಣೆ ಮರೆಯಲು, ಸಮಾನಮನಸ್ಕರು ಒಂದೇ ಛಾವಣಿಯಡಿ ಸೇರುವ ನಿಟ್ಟಿನಲ್ಲಿ ಪುನರ್ವಸತಿ ಗ್ರಾಮ, ಸಮಗ್ರ ಚಿಕಿತ್ಸೆ ಒದಗಿಸಬಲ್ಲ ವೈದ್ಯಕೀಯ ಕಾಲೇಜು, ಆಟ-ಪಾಠಗಳಿಗೆ ಹೊಸ ಹುರುಪು ನೀಡಬಲ್ಲ ಬಡ್ಸ್ ಶಾಲೆ..ಹೀಗೆ ಅನೇಕ ಯೋಜನೆಗಳು ಏಕಕಾಲಕ್ಕೆ ಸಂತ್ರಸ್ತರ ಪಾಲಿಗೆ ಮುದನೀಡುವ ಯೋಜನೆಗಳು ಅನುಷ್ಟಾನಕ್ಕೆ ಬರಲಿವೆ.
ಫೆ.8ರಂದು ವೈದ್ಯಕೀಯ ಕಾಲೇಜು ಕಾರ್ಯಾಲಯ ಮತ್ತು ಬಡ್ಸ್ ಶಾಲೆಗಳನ್ನು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಉದ್ಘಾಟಿಸುವರು. ಈ ಮೂಲಕ ಸಂತ್ರಸ್ತರ ನಿರೀಕ್ಷೆಯ ಹಣತೆ ಬೆಳಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ನಡೆಯುತ್ತಿರುವ ಕಾಸರಗೋಡು ವೈದ್ಯಕೀಯ ಕಾಲೇಜಿನ ವಸತಿ ಸಂಕೀರ್ಣಕ್ಕೆ 29 ಕೋಟಿ ರೂ., ಜಲವಿತರಣೆ ಸೌಲಭ್ಯಕ್ಕೆ 8 ಕೋಟಿ ರೂ. ಮಂಜೂರಾಗಿದೆ.
6600 ಚದರ ಅಡಿ ವಿಸ್ತೀರ್ಣ ಹೊಂದಿರು , ಮೂರು ಅಂತಸ್ತು ಹೊಂದಿರುವ ಹೆಣ್ಣುಮಕ್ಕಳ ಹಾಸ್ಟೆಲ್, 8 ಅಂತಸ್ತು ಹೊಂದಿರುವ ಶಿಕ್ಷಕರ ಕ್ವಾರ್ಟರ್ಸ್ ಸಹಿತ ವೈದ್ಯಕೀಯ ಕಾಲೇಜು ವಸತಿ ಸಂಕೀರ್ಣ ದ ಎಸ್ಟಿಮೇಟ್ ಸಿದ್ಧವಾಗಿದೆ. ಜಾರಿಯಲ್ಲಿರುವ ನೀರಿನ ಸರಬರಾಜು ಯೋಜನೆಯಲ್ಲಿ ಹೆಚ್ಚುವರಿ ಫೀಡರ್ ಲೈನ್ ಸ್ಥಾಪಿಸಿ ಬದಿಯಡ್ಕದಲ್ಲಿರುವ ವೈದ್ಯಕೀಯ ಕಾಲೇಜು ಸಂಕೀರ್ಣ ಮತ್ತು ಸಮೀಪ ಪ್ರದೇಶಗಳಿಗೆ ನೀರು ಸರಬರಾಜಿಗೆ ಸೌಲಭ್ಯ ಏರ್ಪಡಿಸಲಾಗುವುದು. ಶುದ್ಧೀಕರಿಸಿದ ನೀರನ್ನು ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಪೂರೈಕೆಗೊಳಿಸಲು 3 ಲಕ್ಷ ಲೀಟರ್ ಸಂಗ್ರಹ ಸಾಮಥ್ರ್ಯ ದ ಟಾಂಕಿಗಳನ್ನು ಎಣ್ಮಕಜೆ ಗ್ರಾಮಪಂಚಾಯತ್ ನ ಪೆರ್ಲ ಮತ್ತು ಬದಿಯಡ್ಕದ ವೈದ್ಯಕೀಯ ಕಾಲೇಜು ಕ್ಯಾಂಪಸ್ ನಲ್ಲೂ ನಿರ್ಮಿಸಲಾಗುವುದು. ಈ ಜಲಯೋಜನೆಯ ಮೂಲ ಶಿರಿಯಾ ನದಿಯಾಗಿದೆ.

