ಕುಂಬಳೆ: ಕಲೆಗಳನ್ನು ಸೇವಾ ಮನೋಭಾವ, ಬದ್ದತೆಯೊಂದಿಗೆ ತೊಡಗಿಸಿಕೊಂಡಾಗ ಕಲಾವಿದ, ಸಂಘಟಕರಿಗೆ ಸಾಥ್ರ್ಯಕ್ಯದ ಭಾವ ಒಡಮೂಡಲು ಸಾಧ್ಯವಾಗುವುದು. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದಲ್ಲಿ ಸಮಾಜದ ಉನ್ನತಿಯನ್ನು ಕಾಣಲು ಸಾಧ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅವರು ತಿಳಿಸಿದರು.
ಸೂರಂಬೈಲಿನ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸೂರಂಬೈಲು ಶ್ರೀಗಣೇಶ ಕಲಾಮಂದಿರದಲ್ಲಿ ಆಯೋಜಿಸಲಾದ ಎರಡು ದಿನಗಳ ವಿಶೇಷ ಕಾರ್ಯಕ್ರಮ "ಹಿರಿಯರ ನೆನಪು ಮತ್ತು ಯಕ್ಷಗಾನ ಪೂರ್ವರಂಗ ಅಧ್ಯಯನ ಶಿಬಿರ"ದ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಇತಿಹಾಸ ಎಂದಿಗೂ ವರ್ತಮಾನದ ಯಶಸ್ಸಿಗೆ ದಾರಿದೀಪವಾಗಿ ಮುನ್ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಹೆಚ್ಚು ಜನಮನ್ನಣೆ ಗಳಿಸಿರುವ ಯಕ್ಷಗಾನ ಕ್ಷೇತ್ರ ಪರಂಪರೆಯನ್ನು ಮರೆಯುವುದು ಸಾಂಸ್ಕøತಿಕ ವಿಸ್ಮøತಿಗೆ ಕಾರಣವಾಗುವ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಬೊಟ್ಟುಮಾಡಿದರು. ಯುವ ತಲೆಮಾರನ್ನು ಸಮರ್ಥ ನಿರ್ದೇಶನದಡಿಯಲ್ಲಿ ಕಲೆಯ ಮೂಲ ಸ್ವರೂಪಕ್ಕೆ ಅಡಚಣೆಯಾಗದಂತೆ ಪರಿಪೋಶಿಸುವ ವಿವಿಧ ಆಯಾಮಗಳ ಇಂತಹ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಅನುಭವಿಗಳ ಮಾರ್ಗದರ್ಶನ, ನಿರ್ದೇಶನಗಳು ಯಕ್ಷಗಾನವನ್ನು ಇನ್ನಷ್ಟು ಬೆಳೆಸುವಲ್ಲಿ ಹೆಗ್ಗುರುಗಳಾಗುತ್ತವೆ ಎಂದು ಅವರು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ, ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ಅವರು ಮಾತನಾಡಿ, ಆಗಸದ ನಕ್ಷತ್ರಗಳು ಭಾವ ಸೆಲೆಯಾಗಿ, ಹರಡಿರುವ ಕಡಲು ಜೀವ ಸೆಲೆಯಾಗಿ ಮಾನವ ಜೀವನದ ಮೇಲೆ ಗಾಢ ಪ್ರಭಾವ ಬೀರಿದೆ. ಯಕ್ಷಗಾನವು ಗಡಿನಾಡು ಕಾಸರಗೋಡಿನ ಜೀವ-ಭಾವ ಸೆಲೆಯಾಗಿ ಮಹತ್ವಪೂರ್ಣವಾಗಿದೆ ಎಂದರು. ವಾಚಿಕಾಭಿನಯದ ವಿಶಿಷ್ಟತೆಯ ಮೂಲಕ ಜಗತ್ತಿನಲ್ಲೇ ಏಕೈಕ ರಂಗ ಪ್ರಸ್ತುತಿಯಾಗಿರುವ ಯಕ್ಷಗಾನ ಅವಾಸ್ಥವ ರಂಗಭೂಮಿಯಾಗಿ ಪ್ರೇಕ್ಷಕನ ಮನಗೆಲ್ಲುವಲ್ಲಿ ತನ್ನದೇ ವಿಶಿಷ್ಟತೆಯಿಂದ ಬೆರಗುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇದರ ಮೂಲ ಸ್ವರೂಪದ ಅರಿವು ವಿಸ್ತರಿಸುವ ಅಧ್ಯಯನ ಶಿಬಿರಗಳು ಆಗಲೇಬೇಕಾದ ಕಲಾಸೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಅವರು ಸಂಸ್ಕøತಿಯೆಂದರೆ ಅಮ್ಮನ ಮುಗ್ದತೆಯಷ್ಟು ನವುರಾದ ಭಾವ ಸ್ಪಂಧನವಾಗಿದೆ. ಅಂತಹ ಮುಗ್ದತೆ ಮಧುರ ಬದುಕಿಗೆ ಮುಖ್ಯವಾಗಿದ್ದು, ಸಂಸ್ಕಾರವನ್ನು ಕಟ್ಟಿಕೊಡುತ್ತದೆ. ಕಲಾ ಪ್ರೀಯತೆ ನಮ್ಮ ಸಂಸ್ಕøತಿಯ ದೊಡ್ಡ ಅಂಗ ಎಂದು ತಿಳಿಸಿದರು. ವರ್ತಮಾನ ಕಾಲಘಟ್ಟದಲ್ಲಿ ವ್ಯಾವಹಾರಿಕತೆಯ ವ್ಯಾಪಕತೆಯಿಂದ ಯಕ್ಷಗಾನ ಸಹಿತ ವಿವಿಧ ಕಲಾ ಪ್ರಕಾರಗಳಿಗೆ ಅಪಾಯದ ಸ್ಥಿತಿ ಉಂಟಾಗಿದೆ. ಕಲೆಯನ್ನು ವ್ಯಾಪಾರೀಕರಣ ದೃಷ್ಟಿಯಿಂದ ಬಳಸುತ್ತಿರುವುದರಿಂದ ಪರಂಪರೆಗೆ ಧಕ್ಕೆಯಾಗಿರುವುದು ಖೇದಕರ ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ಹಿರಿಯ ತಲೆಮಾರಿನ ಎಲೆಮರೆಯಲ್ಲಿರುವ ಸಾಧಕ ಶ್ರೇಷ್ಠರ ನೆನಪಿಸುವಿಕೆ ಸ್ತುತ್ಯರ್ಹವಾದುದು ಎಂದರು.
ಈ ಸಂದರ್ಭ ನಡೆದ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ದಿ.ಕೆ.ಗೋವಿಂದ ಭಟ್ ಸೂರಂಬೈಲು, ದಿ.ಕೆ.ರಾಮಯ್ಯ ಭಟ್ ಕುಳ್ಳಂಬೆಟ್ಟು, ದಿ.ವಿಠಲ ಶರ್ಮ ಅಜ್ಜಕಾನ, ದಿ.ಆನಂದ ನಾಯಕ್ ಸೂರಂಬೈಲು, ದಿ.ಗಣಪತಿ ದಿವಾಣ ಇವರ ಸಂಸ್ಮರಣೆಯನ್ನು ನಾರಾಯಣ ಮಣಿಯಾಣಿ ಬೆಳ್ಳಿಗೆ ಹಾಗೂ ಗೋಪಾಲಕೃಷ್ಣ ನಾಯಕ್ ಸೂರಂಬೈಲು ನಿರ್ವಹಿಸಿ ಮಾತನಾಡಿದರು.ಪುತ್ತಿಗೆ ಗ್ರಾ.ಪಂ.ಸದಸ್ಯ ವರಪ್ರಸಾದ್ ಪೆರ್ಣೆ, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಯಕ್ಷಗಾನ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ಪೆಡೆದ ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಅವರನ್ನು ಈ ಸಂದರ್ಭ ಗೌರವಿಸಿ ಅಭಿನಂದಿಸಲಾಯಿತು. ಶಿಬಿರದ ನಿರ್ದೇಶಕ, ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ಅಧ್ಯಕ್ಷ ದಿವಾಣ ಶಿವಶಂಕರ ಭಟ್ ಉಪಸ್ಥಿತರಿದ್ದರು. ಷಣ್ಮುಖ ಕೃಷ್ಣ ಅರೋಳಿ ಯಕ್ಷಗಾನೀಯ ಪ್ರಾರ್ಥನಾ ಪದ್ಯದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಗೌತಮ್ ಬೆದ್ರಡ್ಕ ಸ್ವಾಗತಿಸಿ, ನವೀನ್ ಚಂದ್ರ ಶರ್ಮ ನಾಯ್ಕಾಪು ವಂದಿಸಿದರು. ಸಚಿನ್ ಶೆಟ್ಟಿ ಕುದ್ರೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.





